ಮನಸ್ತಾಪಗಳನ್ನು ಬಗೆಹರಿಸಿ ಶಾಂತಿ ಕಾಪಾಡಿಕೊಳ್ಳುತ್ತೀರಾ?
ಯೆಹೋವ ದೇವರ ಆರಾಧಕರು ಶಾಂತಿ-ಸಮಾಧಾನದಿಂದ ಇರಬೇಕು, ಒಬ್ಬರಿಗೊಬ್ಬರು ಒಳ್ಳೇ ಸಂಬಂಧ ಇಟ್ಟುಕೊಂಡಿರಬೇಕು ಎನ್ನುವುದು ಆತನ ಆಸೆ. ಹೀಗಿದ್ದರೆ ಮಾತ್ರ ಕ್ರೈಸ್ತ ಸಭೆಯಲ್ಲಿ ಶಾಂತಿ ಇರುತ್ತದೆ. ಇದು ಹೊಸಬರನ್ನು ಸಭೆಗೆ ಆಕರ್ಷಿಸುತ್ತದೆ.
ಉದಾಹರಣೆಗೆ, ಮಡಗಾಸ್ಕರ್ನ ಒಬ್ಬ ಮಂತ್ರವಾದಿ ಯೆಹೋವನ ಜನರ ಮಧ್ಯೆ ಇರುವ ಶಾಂತಿಯನ್ನು ನೋಡಿ ಬೆರಗಾದ. ‘ನಾನು ಯಾವುದಾದರೂ ಧರ್ಮಕ್ಕೆ ಸೇರಿಕೊಳ್ಳಬೇಕೆಂದು ನೆನಸಿದರೆ ಈ ಧರ್ಮಕ್ಕೇ ಸೇರಿಕೊಳ್ಳುತ್ತೇನೆ’ ಎಂದೂ ಹೇಳಿದ್ದ. ಕ್ರಮೇಣ ಭೂತಾರಾಧನೆಯನ್ನು ಬಿಟ್ಟುಬಿಟ್ಟ. ತನ್ನ ವಿವಾಹಬಂಧವನ್ನು ಬೈಬಲ್ ಮಟ್ಟಕ್ಕೆ ತಕ್ಕಂತೆ ಸರಿಪಡಿಸಿಕೊಂಡ. ಶಾಂತಿಯ ದೇವರಾದ ಯೆಹೋವನನ್ನು ಆರಾಧಿಸಲು ಆರಂಭಿಸಿದ.
ಈ ವ್ಯಕ್ತಿಯಂತೆ ಇಂದು ಪ್ರತಿ ವರ್ಷ ಸಾವಿರಾರು ಜನರು ಸಭೆಯ ಭಾಗವಾಗುತ್ತಿದ್ದಾರೆ. ಅವರು ಬಯಸುವ ಶಾಂತಿ-ಸಮಾಧಾನ ಸಭೆಯಲ್ಲಿ ಸಿಕ್ಕಿದೆ. ಆದರೆ ಸಭೆಯಲ್ಲಿ “ತೀಕ್ಷ್ಣವಾದ ಹೊಟ್ಟೆಕಿಚ್ಚೂ ಕಲಹಶೀಲ ಮನೋಭಾವವೂ” ಇದ್ದರೆ ಸ್ನೇಹಸಂಬಂಧಗಳು ಮುರಿದುಹೋಗಿ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಎಂದು ಬೈಬಲ್ ಹೇಳುತ್ತದೆ. (ಯಾಕೋ. 3:14-16) ಇಂಥ ಸಮಸ್ಯೆಗಳು ಆಗದಂತೆ ನೋಡಿಕೊಳ್ಳಲು ಮತ್ತು ನಮ್ಮ ಸಹೋದರ ಸಹೋದರಿಯರ ಜೊತೆ ಶಾಂತಿ ಕಾಪಾಡಿಕೊಳ್ಳಲು ಬೈಬಲ್ ಒಳ್ಳೇ ಸಲಹೆಗಳನ್ನು ನೀಡುತ್ತದೆ. ಈ ಸಲಹೆಗಳನ್ನು ಅನ್ವಯಿಸಿ ಪ್ರಯೋಜನ ಪಡೆದವರ ಉದಾಹರಣೆಗಳನ್ನು ನಾವೀಗ ನೋಡೋಣ.
ಸಮಸ್ಯೆಗಳು ಮತ್ತು ಪರಿಹಾರಗಳು
“ನನ್ನ ಜೊತೆ ಕೆಲಸಮಾಡುತ್ತಿದ್ದ ಸಹೋದರನೊಟ್ಟಿಗೆ ಹೊಂದಿಕೊಂಡು ಹೋಗುವುದು ನನಗೆ ಕಷ್ಟವಾಗುತ್ತಿತ್ತು. ಒಮ್ಮೆಯಂತೂ ನಾವು ಕಿರುಚಾಡುತ್ತಿದ್ದಾಗ ಇಬ್ಬರು ಬಂದು ನಾವು ಜಗಳ ಮಾಡುತ್ತಿರುವುದನ್ನು ನೋಡಿಬಿಟ್ಟರು.”—ಕ್ರಿಸ್.
“ನನ್ನ ಜೊತೆ ಯಾವಾಗ್ಲೂ ಸೇವೆಗೆ ಬರುತ್ತಿದ್ದ ಸಹೋದರಿ ದಿಢೀರಂತ ನನ್ನ ಜೊತೆ ಸೇವೆ ಮಾಡೋದನ್ನೇ ನಿಲ್ಲಿಸಿಬಿಟ್ಟರು. ಆಮೇಲೆ ಮಾತಾಡುವುದನ್ನೂ ಬಿಟ್ಟುಬಿಟ್ಟರು. ಯಾಕೆ, ಏನಾಯ್ತು ಅಂತ ನನಗೆ ಅರ್ಥನೇ ಆಗಲಿಲ್ಲ.”—ಜ್ಯಾನೆಟ್.
“ನಾವು ಮೂರು ಜನ ಫೋನಲ್ಲಿ ಮಾತಾಡುತ್ತಾ ಇದ್ದೆವು. ಒಬ್ಬರು ಬಾಯ್ ಹೇಳಿದರು. ಅವರು ಫೋನ್ ಇಟ್ಟುಬಿಟ್ಟರು ಅಂದುಕೊಂಡು ನಾನು ಅವರ ಬಗ್ಗೆ ಇನ್ನೊಬ್ಬರ ಹತ್ತಿರ ಸ್ವಲ್ಪ ಕೆಟ್ಟದಾಗಿ ಮಾತಾಡಿಬಿಟ್ಟೆ. ಆದರೆ ಅವರು ಫೋನ್ ಇಟ್ಟಿರಲಿಲ್ಲ. ನಾನು ಹೇಳೋದನ್ನೆಲ್ಲ ಕೇಳಿಸಿಕೊಂಡುಬಿಟ್ಟರು.”—ಮೈಕಲ್.
“ನಮ್ಮ ಸಭೆಯಲ್ಲಿ ಇಬ್ಬರು ಪಯನೀಯರ್ ಸಹೋದರಿಯರ ಮಧ್ಯೆ ಏನೋ ಮನಸ್ತಾಪ ಆಗಿತ್ತು. ಒಬ್ಬರು ಇನ್ನೊಬ್ಬರನ್ನು ಬೈಯಲಿಕ್ಕೆ ಶುರುಮಾಡಿದರು. ಅವರ ಮಧ್ಯೆ ನಡೆಯುತ್ತಿದ್ದ ಜಗಳದಿಂದಾಗಿ ಬೇರೆಯವರಿಗೆ ಬೇಜಾರಾಯಿತು.”—ಗ್ಯಾರಿ.
ಇದೆಲ್ಲ ಅಷ್ಟು ದೊಡ್ಡ ಸಮಸ್ಯೆಗಳಲ್ಲ ಅಂತ ನಿಮಗೆ ಅನಿಸಬಹುದು. ಆದರೆ ಈ ಸಮಸ್ಯೆಗಳು ಆ ಸಹೋದರ ಸಹೋದರಿಯರ ಮನಸ್ಸಿಗಾದ ನೋವು ಮಾಸದೇ ಉಳಿಯುವ ಮತ್ತು ಸಭೆಯ ಶಾಂತಿಯನ್ನೂ ಕೆಡಿಸುವ ಸಾಧ್ಯತೆ ಇತ್ತು. ಸಂತೋಷದ ವಿಷಯ ಏನೆಂದರೆ, ಅವರು ಬೈಬಲ್ ಕೊಡುವ ಸಲಹೆಗಳನ್ನು ಪಾಲಿಸಿ ಪುನಃ ಒಂದಾದರು, ತಮ್ಮ ಮಧ್ಯೆ ಶಾಂತಿ ಕಾಪಾಡಿಕೊಂಡರು. ಅವರಿಗೆ ಬೈಬಲಿನ ಯಾವ ಸಲಹೆಗಳು ಸಹಾಯ ಮಾಡಿದವೆಂದು ನೆನಸ್ತೀರಾ?
“ನೀವು ದಾರಿಯಲ್ಲಿ ಜಗಳಮಾಡಬೇಡಿರಿ.” (ಆದಿ. 45:24) ಯೋಸೇಫನು ಈ ಬುದ್ಧಿಮಾತನ್ನು ತನ್ನ ಸಹೋದರರು ತಂದೆಯ ಹತ್ತಿರ ವಾಪಸ್ಸು ಹೋಗುವ ಮುಂಚೆ ಹೇಳಿದನು. ಒಬ್ಬ ವ್ಯಕ್ತಿ ತನ್ನ ಭಾವನೆಗಳನ್ನು ಹತೋಟಿಯಲ್ಲಿ ಇಡದೆ, ಬೇಗನೆ ಕೋಪ ಮಾಡಿಕೊಂಡರೆ ಬೇರೆಯವರಿಗೂ ಕೋಪ ಬರಬಹುದು. ಹೀಗೆ ಸಮಸ್ಯೆ ದೊಡ್ಡದಾಗಬಹುದು. ಕ್ರಿಸ್ಗೆ ಕೆಲವೊಮ್ಮೆ ದೀನತೆ ತೋರಿಸಲು, ಬೇರೆಯವರು ಕೊಟ್ಟ ಸಲಹೆಗಳನ್ನು ಪಾಲಿಸಲು ಕಷ್ಟವಾಗುತ್ತಿತ್ತು. ಆದರೆ ಅವನು ಬದಲಾಗಲು ಬಯಸಿದ. ಅವನು ಜಗಳ ಮಾಡಿದ ಸಹೋದರನ ಹತ್ತಿರ ಹೋಗಿ ಕ್ಷಮೆ ಕೇಳಿದ. ತನ್ನ ಕೋಪವನ್ನು ನಿಯಂತ್ರಿಸಲು ಶತಪ್ರಯತ್ನ ಮಾಡಿದ. ಇದನ್ನು ಆ ಸಹೋದರ ನೋಡಿದಾಗ ಅವನೂ ಸಹಾಯ ಮಾಡಿದ. ಈಗ ಅವರಿಬ್ಬರೂ ಯೆಹೋವನ ಸೇವೆಯನ್ನು ಶಾಂತಿ-ಸಮಾಧಾನದಿಂದ ಮಾಡುತ್ತಿದ್ದಾರೆ.
“ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು.” (ಜ್ಞಾನೋ. 15:22) ಸ್ನೇಹಿತೆ ಮಾತುಬಿಟ್ಟಾಗ ಜ್ಯಾನೆಟ್ ಈ ಬೈಬಲ್ ಸಲಹೆಯನ್ನು ಪಾಲಿಸಿದಳು. ಅವಳು ಆ ಸಹೋದರಿಯ ಹತ್ತಿರ ‘ಹೇಳಲು’ ಅಂದರೆ ತಾನೇ ಮಾತಾಡುವ ನಿರ್ಧಾರ ಮಾಡಿದಳು. ತಾನೇನಾದರೂ ನೋವು ಮಾಡಿದೆನಾ ಎಂದು ಕೇಳಿದಳು. ಮೊದಲು ಇಬ್ಬರಿಗೂ ಮಾತಾಡಲು ಇರಿಸುಮುರಿಸಾಯಿತು. ಆದರೆ ಶಾಂತವಾಗಿಯೇ ಮಾತಾಡುತ್ತಾ ಮಾತಾಡುತ್ತಾ ಇಬ್ಬರಿಗೂ ಹಾಯೆನಿಸಿತು. ಜ್ಯಾನೆಟ್ ಮಾಡಿದ ಯಾವುದೋ ಒಂದು ವಿಷಯವನ್ನು ಆ ಸಹೋದರಿ ತಪ್ಪಾಗಿ ಅರ್ಥಮಾಡಿಕೊಂಡಿದ್ದಳು. ಅವರ ಮನನೋಯಿಸುವ ಉದ್ದೇಶದಿಂದ ಜ್ಯಾನೆಟ್ ಏನೂ ಮಾಡಿರಲಿಲ್ಲ ಎಂದು ಆ ಸಹೋದರಿಗೆ ಅರ್ಥವಾದಾಗ ಕ್ಷಮೆ ಕೇಳಿದಳು. ಇಬ್ಬರೂ ಪುನಃ ಸ್ನೇಹಿತೆಯರಾದರು. ಒಟ್ಟಿಗೆ ಯೆಹೋವನ ಸೇವೆ ಮಾಡುತ್ತಿದ್ದಾರೆ.
“ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಮುಂದೆ ತರುತ್ತಿರುವಾಗ, ನಿನ್ನ ಸಹೋದರನಿಗೆ ನಿನ್ನ ವಿರುದ್ಧ ಏನೋ ಅಸಮಾಧಾನವಿದೆ ಎಂದು ನಿನಗೆ ಅಲ್ಲಿ ನೆನಪಾದರೆ ನಿನ್ನ ಕಾಣಿಕೆಯನ್ನು ಅಲ್ಲಿ ಯಜ್ಞವೇದಿಯ ಮುಂದೆ ಬಿಟ್ಟುಹೋಗಿ, ಮೊದಲು ನಿನ್ನ ಸಹೋದರನೊಂದಿಗೆ ಸಮಾಧಾನ ಮಾಡಿಕೊ.” (ಮತ್ತಾ. 5:23, 24) ಯೇಸು ಪರ್ವತ ಪ್ರಸಂಗದಲ್ಲಿ ಈ ಸಲಹೆಯನ್ನು ಕೊಟ್ಟನು. ಮೈಕಲ್ ಇನ್ನೊಬ್ಬ ಸಹೋದರನ ಬಗ್ಗೆ ಕೆಟ್ಟದಾಗಿ ಮಾತಾಡಿದ ನಂತರ ‘ಛೇ ನಾನು ಹಾಗೆ ಮಾತಾಡಬಾರದಿತ್ತು’ ಅಂತ ಅನಿಸಿತು. ಹಾಳಾದ ಸಂಬಂಧವನ್ನು ಹೇಗಾದರೂ ಸರಿಮಾಡಬೇಕು ಎಂದು ಮೈಕಲ್ತೀರ್ಮಾನಿಸಿದನು. ಆ ಸಹೋದರನ ಹತ್ತಿರ ಹೋಗಿ ಕ್ಷಮೆ ಕೇಳಿ, ತಾನು ಹಾಗೆ ಮಾತಾಡಿದ್ದಕ್ಕೆ ತನಗೇ ತುಂಬ ಬೇಜಾರಾಗುತ್ತಿದೆ ಎಂದನು. ಆಮೇಲೆ ಏನಾಯಿತು? “ನನ್ನ ಸಹೋದರ ನನ್ನನ್ನು ಮನಸಾರೆ ಕ್ಷಮಿಸಿದ” ಎನ್ನುತ್ತಾನೆ ಮೈಕಲ್. ಅವರಿಬ್ಬರೂ ಪುನಃ ಸ್ನೇಹಿತರಾದರು.
“ಮತ್ತೊಬ್ಬನ ವಿರುದ್ಧ ದೂರುಹೊರಿಸಲು ಕಾರಣವಿದ್ದರೂ ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ.” (ಕೊಲೊ. 3:12-14) ಸೇವೆಗೆ ಹೋದಲ್ಲಿ ಜಗಳ ಮಾಡಿಕೊಂಡ ಇಬ್ಬರು ಪಯನೀಯರ್ ಸಹೋದರಿಯರ ಬಗ್ಗೆ ಆರಂಭದಲ್ಲಿ ಓದಿದೆವಲ್ಲಾ? ಒಬ್ಬ ಹಿರಿಯರು ಅವರ ಹತ್ತಿರ ದಯೆಯಿಂದ ಮಾತಾಡಿ ಅವರಿಂದಾಗಿ ಬೇರೆಯವರಿಗೂ ಬೇಜಾರಾಗಿದೆ ಎನ್ನುವುದನ್ನು ವಿವರಿಸಿದರು. ಅವರು ಒಬ್ಬರಿಗೊಬ್ಬರು ತಾಳ್ಮೆ ತೋರಿಸಬೇಕು, ಸಭೆಯ ಶಾಂತಿ ಕಾಪಾಡಿಕೊಳ್ಳಲು ಸಹಾಯ ಮಾಡಬೇಕು ಎಂದು ಆ ಹಿರಿಯ ನೆನಪಿಸಿದರು. ಆ ಸಲಹೆಯನ್ನು ಸಹೋದರಿಯರು ಸ್ವೀಕರಿಸಿ ಅನ್ವಯಿಸಿಕೊಂಡರು. ಈಗ ಒಬ್ಬರಿಗೊಬ್ಬರು ಚೆನ್ನಾಗಿ ಹೊಂದಿಕೊಂಡು ಸುವಾರ್ತೆ ಸಾರುತ್ತಿದ್ದಾರೆ.
ನಮ್ಮನ್ನು ಯಾರಾದರೂ ನೋಯಿಸಿರುವುದಾದರೆ ದೀನತೆ ತೋರಿಸಿ ಅವರನ್ನು ಕ್ಷಮಿಸಲು ಮತ್ತು ಆ ಬೇಜಾರನ್ನು ಮನಸ್ಸಿನಿಂದ ತೆಗೆದುಹಾಕಲು ಮೇಲೆ ತಿಳಿಸಲಾದ ಕೊಲೊಸ್ಸೆ 3:12-14ರಲ್ಲಿರುವ ಸಲಹೆ ಸಹಾಯಮಾಡುತ್ತದೆ. ಆದರೆ ಅವರನ್ನು ಕ್ಷಮಿಸಲು ನಾವು ಪ್ರಯತ್ನಿಸುತ್ತಿದ್ದರೂ ಆಗದಿದ್ದರೆ ಏನು ಮಾಡಬೇಕು? ಆಗ ಮತ್ತಾಯ 18:15ರಲ್ಲಿರುವ ತತ್ವ ನಮಗೆ ಸಹಾಯ ಮಾಡುತ್ತದೆ. ಗಂಭೀರ ಪಾಪಗಳ ಸಂಬಂಧವಾಗಿ ಯೇಸು ಈ ತತ್ವವನ್ನು ಕೊಟ್ಟಿರುವುದಾದರೂ ನಮ್ಮ ಸಹೋದರ ಸಹೋದರಿಯರ ಜೊತೆ ಏನಾದರೂ ಸಮಸ್ಯೆ ಆದಾಗಲೂ ಇದನ್ನು ಅನ್ವಯಿಸಿಕೊಳ್ಳಬಹುದು. ಆ ವ್ಯಕ್ತಿಯ ಬಳಿ ಹೋಗಿ ದಯೆಯಿಂದ, ದೀನತೆಯಿಂದ ಮಾತಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
ಬೈಬಲಿನಲ್ಲಿ ಇನ್ನೂ ಅನೇಕ ಸಲಹೆಗಳಿವೆ. ಈ ಸಲಹೆಗಳನ್ನು ಅನ್ವಯಿಸಲು ದೇವರ ಪವಿತ್ರಾತ್ಮದ ಸಹಾಯ ಬೇಕಾಗುತ್ತದೆ. ಆಗ ಮಾತ್ರ ನೀವು ‘ಪವಿತ್ರಾತ್ಮದ ಫಲವಾದ ಪ್ರೀತಿ, ಆನಂದ, ಶಾಂತಿ, ದೀರ್ಘ ಸಹನೆ, ದಯೆ, ಒಳ್ಳೇತನ, ನಂಬಿಕೆ, ಸೌಮ್ಯಭಾವ, ಸ್ವನಿಯಂತ್ರಣವನ್ನು’ ತೋರಿಸಲು ಸಾಧ್ಯವಾಗುತ್ತದೆ. (ಗಲಾ. 5:22, 23) ಒಂದು ಯಂತ್ರ ಸುಗಮವಾಗಿ ಕೆಲಸಮಾಡಬೇಕಾದರೆ ಅದಕ್ಕೆ ಎಣ್ಣೆ ಹಾಕಬೇಕಾಗುತ್ತದೆ. ಹಾಗೆಯೇ ಸಮಾಧಾನ ಮಾಡಿಕೊಳ್ಳಲು ನಾವು ಹಾಕುವ ಪ್ರಯತ್ನ ಸುಗಮವಾಗಿ ಸಾಗಬೇಕಾದರೆ ಪವಿತ್ರಾತ್ಮದ ಫಲ ಬೇಕಾಗುತ್ತದೆ.
ವ್ಯಕ್ತಿತ್ವಗಳು ಭಿನ್ನ, ಸಭೆಗಳು ಚೆನ್ನ
ಒಬ್ಬೊಬ್ಬರಿಗೂ ಒಂದೊಂದು ವ್ಯಕ್ತಿತ್ವ ಇರುತ್ತದೆ. ಪ್ರತಿಯೊಬ್ಬರೂ ಯೋಚಿಸುವ ರೀತಿ, ವಿಷಯಗಳನ್ನು ವ್ಯಕ್ತಪಡಿಸುವ ವಿಧ ಬೇರೆಬೇರೆ ಆಗಿರುತ್ತದೆ. ಇದರಿಂದಾಗಿ ನಮ್ಮ ಸ್ನೇಹಸಂಬಂಧದಲ್ಲಿ ಸ್ವಾರಸ್ಯ, ಸಂತೋಷ ಇರುತ್ತದೆ. ಆದರೆ ಇದೇ ವಿಷಯದಿಂದ ಭಿನ್ನಾಭಿಪ್ರಾಯಗಳೂ ಮನಸ್ತಾಪಗಳೂ ಏಳುವ ಸಾಧ್ಯತೆ ಇದೆ. ಇದಕ್ಕೆ ಒಬ್ಬ ಹಿರಿಯ ಒಂದು ಉದಾಹರಣೆ ಕೊಟ್ಟರು. ಅವರು ಹೇಳಿದ್ದು: “ತುಂಬ ನಾಚಿಕೆ ಸ್ವಭಾವದ ವ್ಯಕ್ತಿಗೆ, ಎಲ್ಲರ ಹತ್ತಿರ ಮಾತಾಡುತ್ತಾ ಚೆನ್ನಾಗಿ ಬೆರೆಯುವ ಉತ್ಸಾಹದ ಚಿಲುಮೆಯಂತಿರುವ ವ್ಯಕ್ತಿ ಜೊತೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟ ಆಗಬಹುದು. ವ್ಯಕ್ತಿತ್ವಗಳಲ್ಲಿನ ಇಂಥ ವ್ಯತ್ಯಾಸ ಚಿಕ್ಕ ವಿಷಯ ಅಂತ ಅನಿಸಿದರೂ, ಅದೇ ದೊಡ್ಡ ಸಮಸ್ಯೆಗೆ ಕಾರಣ ಆಗುವ ಸಾಧ್ಯತೆ ಇದೆ.” ಬೇರೆಬೇರೆ ವ್ಯಕ್ತಿತ್ವಗಳಿರುವ ಇಬ್ಬರು ವ್ಯಕ್ತಿಗಳು ಹೊಂದಿಕೊಂಡು ಹೋಗಲು ಸಾಧ್ಯವೇ ಇಲ್ಲ ಅಂತ ನಿಮಗೆ ಅನಿಸುತ್ತದಾ? ಇಬ್ಬರು ಅಪೊಸ್ತಲರನ್ನು ತೆಗೆದುಕೊಳ್ಳಿ. ಒಬ್ಬನು ಪೇತ್ರ. ಇನ್ನೊಬ್ಬನು ಅಪೊಸ್ತಲ ಯೋಹಾನ. ಪೇತ್ರ ಎಂದ ಕೂಡಲೇ ಮನಸ್ಸಿನಲ್ಲಿದ್ದದನ್ನು ನೇರವಾಗಿ ಹೇಳಿಬಿಡುವ ವ್ಯಕ್ತಿ ನೆನಪಾಗುತ್ತಾನೆ. ಆದರೆ ಯೋಹಾನ ಎಂದ ಕೂಡಲೇ, ಏನೇ ಹೇಳುವ ಅಥವಾ ಮಾಡುವ ಮುಂಚೆ ಚೆನ್ನಾಗಿ ಯೋಚಿಸುವ, ತುಂಬ ಪ್ರೀತಿ ತೋರಿಸುವ ವ್ಯಕ್ತಿ ನೆನಪಾಗುತ್ತಾನೆ. ಹೀಗೆ ಅವರ ವ್ಯಕ್ತಿತ್ವಗಳು ಭಿನ್ನಭಿನ್ನವಾಗಿದ್ದರೂ ಒಬ್ಬರಿಗೊಬ್ಬರು ಹೊಂದಿಕೊಂಡು ಯೆಹೋವನ ಸೇವೆ ಮಾಡಿದರು. (ಅ. ಕಾ. 8:14; ಗಲಾ. 2:9) ಇಂದು ಕೂಡ ಕ್ರೈಸ್ತರಲ್ಲಿ ಬೇರೆಬೇರೆ ವ್ಯಕ್ತಿತ್ವಗಳಿರುವ ಸಹೋದರ ಸಹೋದರಿಯರಿದ್ದರೂ ಒಬ್ಬರಿಗೊಬ್ಬರು ಚೆನ್ನಾಗಿ ಹೊಂದಿಕೊಂಡು ಕೆಲಸ ಮಾಡಬಹುದು.
ನಿಮ್ಮ ಸಭೆಯಲ್ಲಿ ಒಬ್ಬರು ಹೇಳುವ ಅಥವಾ ಮಾಡುವ ವಿಷಯ ನಿಮಗೆ ಕೋಪ ಬರಿಸುವುದಾದರೆ ಏನು ಮಾಡುತ್ತೀರಾ? ಯೇಸು ನಿಮಗಾಗಿ ಮಾತ್ರವಲ್ಲ ಅವರಿಗಾಗಿಯೂ ಪ್ರಾಣಕೊಟ್ಟಿದ್ದಾನೆ ಮತ್ತು ನೀವು ಅವರನ್ನು ಪ್ರೀತಿಸಬೇಕೆಂದು ಆಜ್ಞೆಕೊಟ್ಟಿದ್ದಾನೆ ಯೋಹಾ. 13:34, 35; ರೋಮ. 5:6-8) ನಿಮ್ಮ ಮನನೋಯಿಸಿದ ವ್ಯಕ್ತಿಯ ಸ್ನೇಹವೇ ಬೇಡ ಅಥವಾ ಅವರಿಂದ ದೂರವಿರುತ್ತೇನೆ ಎಂದು ನೆನಸುವುದು ಒಳ್ಳೇದಲ್ಲ. ಅದರ ಬದಲಿಗೆ ಹೀಗೆ ಕೇಳಿಕೊಳ್ಳಿ: ‘ಆ ನನ್ನ ಸಹೋದರ ಮಾಡುತ್ತಿರುವುದು ಯೆಹೋವನ ನಿಯಮಕ್ಕೆ ವಿರುದ್ಧವಾಗಿದೆಯಾ? ಅವರು ಬೇಕುಬೇಕೆಂದೇ ನನ್ನ ಮನನೋಯಿಸುತ್ತಿದ್ದಾರಾ ಅಥವಾ ಅವರ ವ್ಯಕ್ತಿತ್ವ ನನಗಿಂತ ಭಿನ್ನವಾಗಿದೆ, ಅಷ್ಟೇನಾ? ನಾನು ಬೆಳೆಸಿಕೊಳ್ಳಬೇಕು ಅಂತ ಇಷ್ಟಪಡುವ ಗುಣಗಳು ಅವರಲ್ಲಿದೆಯಾ?’
ಅನ್ನುವುದನ್ನು ನೆನಪಿಸಿಕೊಳ್ಳಿ. (ಉದಾಹರಣೆಗೆ, ಆ ಸಹೋದರನಿಗೆ ತುಂಬ ಮಾತಾಡುವ ಸ್ವಭಾವ ಇರಬಹುದು. ಆದರೆ ನೀವು ಕಡಿಮೆ ಮಾತಾಡುವ ಸ್ವಭಾವದವರು ಎಂದಿಟ್ಟುಕೊಳ್ಳಿ. ಅವರ ಜೊತೆಗೆ ಸೇವೆಗೆ ಹೋಗಿ ಅವರಿಂದ ಯಾವ ವಿಷಯಗಳನ್ನು ಕಲಿಯಬಹುದೆಂದು ನೋಡಿ. ಅಥವಾ ಅವರು ನಿಮಗಿಂತ ಧಾರಾಳ ಮನಸ್ಸಿನವರು ಆಗಿರಬಹುದು. ವೃದ್ಧರಿಗೆ, ಕಾಯಿಲೆ ಬಿದ್ದಿರುವವರಿಗೆ ಅಥವಾ ಇನ್ಯಾವುದೇ ಸಹಾಯದ ಅಗತ್ಯ ಇರುವವರಿಗೆ ಅವರು ಸಹಾಯ ಮಾಡಿ ಪಡೆಯುತ್ತಿರುವ ಸಂತೋಷವನ್ನು ನೀವು ನೋಡಿರಬಹುದು. ನೀವು ಕೂಡ ಧಾರಾಳ ಮನಸ್ಸಿನವರಾಗಿರಲು ಅವರಿಂದ ಕಲಿಯಬಹುದು ಅಲ್ಲವೇ? ಇದರಿಂದ ನಾವು ಮುಖ್ಯವಾಗಿ ಕಲಿಯುವ ಪಾಠವೇನೆಂದರೆ, ಆ ಸಹೋದರನ ವ್ಯಕ್ತಿತ್ವ ನಿಮ್ಮ ವ್ಯಕ್ತಿತ್ವಕ್ಕಿಂತ ಭಿನ್ನವಾಗಿದ್ದರೂ ಅವರ ಒಳ್ಳೇ ಗುಣಗಳ ಮೇಲೆ ಗಮನಹರಿಸಬೇಕು. ಬಹುಶಃ ನೀವು ಪ್ರಾಣ ಸ್ನೇಹಿತರಾಗದೆ ಇರಬಹುದು, ಆದರೆ ಮುಂಚೆಗಿಂತ ಹತ್ತಿರವಾಗುತ್ತೀರಿ. ಇದರಿಂದ ನಿಮ್ಮ ಮನಸ್ಸಿಗೂ ಶಾಂತಿ, ಸಭೆಯಲ್ಲೂ ಶಾಂತಿ ಇರುತ್ತದೆ.
ಒಂದನೇ ಶತಮಾನದಲ್ಲಿ ಯುವೊದ್ಯ ಮತ್ತು ಸಂತುಕೆ ಎಂಬ ಇಬ್ಬರು ಸಹೋದರಿಯರು ಇದ್ದರು. ಅವರ ವ್ಯಕ್ತಿತ್ವಗಳು ತುಂಬ ಭಿನ್ನವಾಗಿದ್ದವು. ಆದರೂ “ಕರ್ತನಲ್ಲಿ ಒಂದೇ ಮನಸ್ಸುಳ್ಳವರಾಗಿರಿ” ಎಂದು ಅಪೊಸ್ತಲ ಪೌಲ ಅವರನ್ನು ಪ್ರೋತ್ಸಾಹಿಸಿದನು. (ಫಿಲಿ. 4:2) ಪೌಲನು ಹೇಳಿದಂತೆ ನಾವು ಕೂಡ ನಮ್ಮ ಸಹೋದರ ಸಹೋದರಿಯರ ಜೊತೆ ಸೇರಿ ಯೆಹೋವನನ್ನು ಆರಾಧಿಸಬೇಕು ಮತ್ತು ಸಭೆಯ ಶಾಂತಿ ಕಾಪಾಡಿಕೊಳ್ಳಬೇಕು.
ಮನಸ್ತಾಪಗಳು ಮುಂದುವರಿಯದಿರಲಿ
ಬೇರೆಯವರ ಬಗ್ಗೆ ನಮ್ಮ ಮನಸ್ಸಿನಲ್ಲಿ ಸ್ವಲ್ಪ ಕೆಟ್ಟ ಭಾವನೆಯಿದ್ದರೂ ಕೂಡಲೇ ತೆಗೆದುಹಾಕಬೇಕು. ಇಂಥ ಭಾವನೆಗಳನ್ನು ಒಂದು ಸುಂದರ ಹೂದೋಟದಲ್ಲಿರುವ ಕಳೆಗಳಿಗೆ ಹೋಲಿಸಬಹುದು. ಆ ಕಳೆಗಳನ್ನು ಕಿತ್ತುಬಿಸಾಡದಿದ್ದರೆ ಇಡೀ ತೋಟದ ಅಂದಚೆಂದವೇ ಹಾಳಾಗಿಹೋಗುತ್ತದೆ. ಅದೇ ರೀತಿ ಬೇರೆಯವರ ಬಗ್ಗೆ ನಮಗಿರುವ ಕೆಟ್ಟ ಭಾವನೆ ಬೆಳೆಯಲು ಬಿಟ್ಟರೆ ಅದು ಇಡೀ ಸಭೆಯ ಶಾಂತಿಯನ್ನು ಕೆಡಿಸಿಬಿಡುತ್ತದೆ. ಆದರೆ ನಾವು
ಯೆಹೋವನನ್ನು ಮತ್ತು ಸಹೋದರರನ್ನು ಪ್ರೀತಿಸುವುದಾದರೆ ಸಭೆಯ ಶಾಂತಿಯನ್ನು ಕಾಪಾಡಿಕೊಳ್ಳಲು ನಮ್ಮ ಕೈಲಾಗುವುದನ್ನೆಲ್ಲ ಮಾಡುತ್ತೇವೆ.ಮನಸ್ತಾಪಗಳನ್ನು ಬಗೆಹರಿಸಿಕೊಳ್ಳಲು ಹೆಜ್ಜೆಯಿಟ್ಟಾಗ ಸಮಸ್ಯೆ ಸಲೀಸಾಗಿ ಬಗೆಹರಿಯುವುದನ್ನು ನೋಡಿ ನಮಗೇ ಆಶ್ಚರ್ಯವಾಗಬಹುದು. ಇದೇ ಅನುಭವ ಒಬ್ಬ ಸಹೋದರಿಗೆ ಆಯಿತು. ಏನಾಯಿತೆಂದು ವಿವರಿಸುತ್ತಾ ಅವಳು ಹೇಳುವುದು: “ಒಬ್ಬ ಸಹೋದರಿ ನನ್ನನ್ನು ಚಿಕ್ಕ ಮಗು ತರ ನಡೆಸಿಕೊಳ್ಳುತ್ತಿದ್ದರು. ಇದರಿಂದ ನನಗೆ ಕಿರಿಕಿರಿಯಾಯಿತು. ಆ ಕಿರಿಕಿರಿ ಜಾಸ್ತಿಯಾಗುತ್ತಾ ಹೋದಾಗ ನಾನು ಅವರ ಹತ್ತಿರ ಒರಟಾಗಿ ವರ್ತಿಸಲು ಶುರುಮಾಡಿದೆ. ‘ಅವರು ನನಗೆ ಕೊಡಬೇಕಾದ ಗೌರವ ಕೊಡುತ್ತಿಲ್ಲ ಅಂದಮೇಲೆ ನಾನ್ಯಾಕೆ ಅವರಿಗೆ ಗೌರವ ಕೊಡಬೇಕು’ ಅಂತ ಅನಿಸಿತು.”
ಆಮೇಲೆ ಆ ಸಹೋದರಿ ತನ್ನ ಮನೋಭಾವದ ಬಗ್ಗೆ ಯೋಚನೆ ಮಾಡಿದಳು. “ನನ್ನ ವ್ಯಕ್ತಿತ್ವದಲ್ಲೇ ಕೊರತೆಗಳಿವೆ ಎಂದು ಗೊತ್ತಾದಾಗ ನನಗೆ ತುಂಬ ಬೇಜಾರಾಯಿತು. ನಾನು ಯೋಚಿಸುವ ರೀತಿಯನ್ನು ತಿದ್ದಬೇಕೆಂದು ಗೊತ್ತಾಯಿತು. ಯೆಹೋವನಿಗೆ ಪ್ರಾರ್ಥನೆ ಮಾಡಿದೆ. ನಂತರ ಆ ಸಹೋದರಿಗೆ ಒಂದು ಚಿಕ್ಕ ಉಡುಗೊರೆ ಖರೀದಿಸಿ ಅದರ ಜೊತೆಗೆ ಒಂದು ಚಿಕ್ಕ ಕಾರ್ಡ್ ಕೊಟ್ಟೆ. ಅದರಲ್ಲಿ ನಾನು ಕೆಟ್ಟದಾಗಿ ನಡಕೊಂಡದ್ದಕ್ಕೆ ಕ್ಷಮೆ ಕೇಳಿದೆ. ನಾವು ಒಬ್ಬರನ್ನೊಬ್ಬರು ತಬ್ಬಿಕೊಂಡು, ಆಗಿಹೋದದ್ದನ್ನು ಮರೆತುಬಿಡಲು ನಿರ್ಧರಿಸಿದೆವು. ಅವತ್ತಿಂದ ನಮ್ಮ ಮಧ್ಯೆ ಯಾವ ಸಮಸ್ಯೆಯೂ ಆಗಲಿಲ್ಲ.”
ಎಲ್ಲರೂ ಶಾಂತಿ-ನೆಮ್ಮದಿಯಿಂದ ಇರಲು ಇಷ್ಟಪಡುತ್ತಾರೆ. ಆದರೆ ಕೆಲವೊಮ್ಮೆ ತಮ್ಮ ಅಹಂ ಅಥವಾ ಸ್ಥಾನಕ್ಕೆ ಎಲ್ಲಾದರೂ ಧಕ್ಕೆ ಬಂದರೆ ಅವರು ನಡಕೊಳ್ಳುವ ರೀತಿ ಶಾಂತಿ-ಸಮಾಧಾನವನ್ನು ಕೆಡಿಸುತ್ತದೆ. ಇಂಥ ಮನೋಭಾವ ಈ ಲೋಕದಲ್ಲಿ ಸಾಮಾನ್ಯ. ಆದರೆ ತನ್ನ ಆರಾಧಕರು ಆ ರೀತಿ ಇರುವುದನ್ನು ಯೆಹೋವನು ಇಷ್ಟಪಡುವುದಿಲ್ಲ. ಯೆಹೋವನ ಸಾಕ್ಷಿಗಳ ಮಧ್ಯೆ ಶಾಂತಿ, ಒಗ್ಗಟ್ಟು ಇರಲೇಬೇಕು. ‘ನಿಮಗೆ ಕೊಡಲ್ಪಟ್ಟ ಕರೆಗೆ ಯೋಗ್ಯರಾಗಿ ನಡೆದುಕೊಳ್ಳಿ’ ಎಂದು ಪೌಲನು ಕ್ರೈಸ್ತರಿಗೆ ಬರೆಯುವಂತೆ ಯೆಹೋವನು ಪ್ರೇರಿಸಿದನು. “ನೀವು ಪೂರ್ಣ ದೀನಮನಸ್ಸಿನಿಂದಲೂ ಸೌಮ್ಯಭಾವದಿಂದಲೂ ದೀರ್ಘ ಸಹನೆಯಿಂದಲೂ ಪ್ರೀತಿಯಲ್ಲಿ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಶಾಂತಿಯ ಐಕ್ಯಗೊಳಿಸುವ ಬಂಧದಲ್ಲಿ ಪವಿತ್ರಾತ್ಮದ ಮೂಲಕ ಏಕತೆಯನ್ನು ಹೊಂದಲಿಕ್ಕಾಗಿ ಶ್ರದ್ಧೆಯಿಂದ ಪ್ರಯತ್ನಿಸುವವರಾಗಿರಿ” ಎಂದು ಅವರನ್ನು ಪ್ರೋತ್ಸಾಹಿಸಿದನು. (ಎಫೆ. 4:1-3) ಯೆಹೋವನ ಜನರ ಮಧ್ಯೆ ಇರುವ “ಶಾಂತಿಯ ಐಕ್ಯಗೊಳಿಸುವ ಬಂಧ” ಬೇರೆಲ್ಲಿಯೂ ಸಿಗುವುದಿಲ್ಲ. ಅದು ತುಂಬ ಅಮೂಲ್ಯ. ಆದ್ದರಿಂದ ನಾವು ಪ್ರತಿಯೊಬ್ಬರೂ ಆ ಬಂಧವನ್ನು ಇನ್ನಷ್ಟು ಬಲಗೊಳಿಸೋಣ ಮತ್ತು ನಮ್ಮ ಸಹೋದರ ಸಹೋದರಿಯರ ಜೊತೆ ಏನೇ ಮನಸ್ತಾಪಗಳಾದರೂ ಅವನ್ನು ಬಗೆಹರಿಸೋಣ.