ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಸರ್ವಲೋಕದ ನ್ಯಾಯಾಧಿಪತಿ’ ನ್ಯಾಯವನ್ನೇ ನಡಿಸುತ್ತಾನೆ

‘ಸರ್ವಲೋಕದ ನ್ಯಾಯಾಧಿಪತಿ’ ನ್ಯಾಯವನ್ನೇ ನಡಿಸುತ್ತಾನೆ

“ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ.”—ಧರ್ಮೋ. 32:4.

ಗೀತೆಗಳು: 112, 89

1. ಯೆಹೋವನು ಹೊರಡಿಸುವ ತೀರ್ಪು ಸರಿಯಾಗಿರುತ್ತದೆ ಅನ್ನುವ ಭರವಸೆ ಅಬ್ರಹಾಮನಿಗಿತ್ತೆಂದು ಹೇಗೆ ಗೊತ್ತಾಗುತ್ತದೆ? (ಲೇಖನದ ಆರಂಭದ ಚಿತ್ರ ನೋಡಿ.)

“ಸರ್ವಲೋಕಕ್ಕೆ ನ್ಯಾಯತೀರಿಸುವವನು ನ್ಯಾಯವನ್ನೇ ನಡಿಸುವನಲ್ಲವೇ” ಎಂಬ ಪ್ರಶ್ನೆಯನ್ನು ಅಬ್ರಹಾಮ ಕೇಳಿದನು. (ಆದಿ. 18:25) ಅವನ ಮನಸ್ಸಿನಲ್ಲಿ ಸಂಶಯ ಇದ್ದದರಿಂದ ಹೀಗೆ ಕೇಳಲಿಲ್ಲ. ಸೊದೋಮ್‌ ಗೊಮೋರ ಪಟ್ಟಣಗಳ ಮೇಲೆ ಯೆಹೋವನು ಹೊರಡಿಸುವ ತೀರ್ಪು ಸರಿಯಾಗಿರುತ್ತದೆ ಅನ್ನುವ ದೃಢಭರವಸೆ ಅಬ್ರಹಾಮನಿಗಿತ್ತೆಂದು ಅವನ ಮಾತಿನಿಂದ ಗೊತ್ತಾಗುತ್ತದೆ. ಯೆಹೋವನು ‘ದುಷ್ಟರ ಸಂಗಡ ನೀತಿವಂತರನ್ನೂ ಸಂಹರಿಸುವುದಿಲ್ಲ’ ಎಂದು ಅಬ್ರಹಾಮನಿಗೆ ಚೆನ್ನಾಗಿ ಗೊತ್ತಿತ್ತು. ಈ ವಿಷಯದಲ್ಲಿ ಅವನಿಗೆ ಯಾವ ಸಂಶಯವೂ ಇರಲಿಲ್ಲ. ಯೆಹೋವನು ಇಸ್ರಾಯೇಲ್ಯರಿಗೆ ತನ್ನ ಬಗ್ಗೆಯೇ ಹೇಳಿದ್ದು: “ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.”—ಧರ್ಮೋ. 31:19; 32:4.

2. ಯೆಹೋವನಿಂದ ತಪ್ಪಾದ ತೀರ್ಪು ಹೊರಡಲು ಸಾಧ್ಯವೇ ಇಲ್ಲ ಯಾಕೆ?

2 ಯೆಹೋವನು ಯಾವಾಗಲೂ ನ್ಯಾಯವನ್ನೇ ನಡಿಸುತ್ತಾನೆ ಎಂದು ಅಬ್ರಹಾಮನು ಭರವಸೆ ಇಡಲು ಕಾರಣವೇನು? ನೀತಿನ್ಯಾಯದ ವಿಷಯದಲ್ಲಿ ಯೆಹೋವನೇ ಅತಿ ಉತ್ತಮ ಮಾದರಿ ಇಟ್ಟಿದ್ದಾನೆ. ಆತನು ‘ನೀತಿನ್ಯಾಯಗಳನ್ನು ಪ್ರೀತಿಸುವುದರಿಂದ’ ಆತನ ಮಟ್ಟಗಳು ಯಾವಾಗಲೂ ಸರಿಯಾಗಿರುತ್ತವೆ ಮತ್ತು ಆತನು ಹೊರಡಿಸುವ ತೀರ್ಪು ಸಹ ಯಾವಾಗಲೂ ಸರಿಯಾಗಿರುತ್ತದೆ. (ಕೀರ್ತ. 33:5) ಈ ನೀತಿ ಮತ್ತು ನ್ಯಾಯ ಎಂಬ ಪದಗಳಿಗೆ ಹೆಚ್ಚುಕಡಿಮೆ ಒಂದೇ ಅರ್ಥ ಇರುವುದರಿಂದ ಇದನ್ನು ಇಬ್ರಿಯ ಶಾಸ್ತ್ರಗಳಲ್ಲಿ ಅನೇಕ ಸಾರಿ ಒಟ್ಟಿಗೆ ಬಳಸಲಾಗಿದೆ.

3. ಇಂದು ಲೋಕದಲ್ಲಿ ಜನ ಎದುರಿಸುತ್ತಿರುವ ಅನ್ಯಾಯದ ಬಗ್ಗೆ ತಿಳಿಸಿ.

3 ಯೆಹೋವನು ಯಾವಾಗಲೂ ನ್ಯಾಯವನ್ನೇ ನಡಿಸುತ್ತಾನೆ ಅನ್ನುವ ವಿಷಯ ನಮಗೆ ನೆಮ್ಮದಿ ಕೊಡುತ್ತದೆ. ಏಕೆಂದರೆ ಈ ಲೋಕದಲ್ಲೆಲ್ಲಾ ಅನ್ಯಾಯನೇ ತುಂಬಿಕೊಂಡಿದೆ. ಉದಾಹರಣೆಗೆ, ಮಾಡದ ತಪ್ಪಿಗೆ ಜನರಿಗೆ ಶಿಕ್ಷೆ ಕೊಟ್ಟು ಜೈಲಿಗೆ ಹಾಕಲಾಗುತ್ತದೆ. ಆಮೇಲೆ ಡಿಎನ್‌ಎ ಪರೀಕ್ಷೆ ಮಾಡಿದಾಗ ತಪ್ಪು ಇವರದ್ದಲ್ಲ ಎಂದು ಗೊತ್ತಾಗುತ್ತದೆ. ಆದರೆ ಇದೆಲ್ಲಾ ಆಗುವಷ್ಟರಲ್ಲಿ ವ್ಯಕ್ತಿ ಅಪರಾಧಿ ಪಟ್ಟ ಕಟ್ಟಿಕೊಂಡು ಅನೇಕ ವರ್ಷ ಜೈಲಿನಲ್ಲಿ ಕೊಳೆದಿರುತ್ತಾನೆ. ಈ ರೀತಿಯಲ್ಲಿ ಅನ್ಯಾಯ ಆದಾಗ ಜನರು ಬೇಸತ್ತುಹೋಗುತ್ತಾರೆ, ಸಿಟ್ಟುಗೊಳ್ಳುತ್ತಾರೆ. ಕ್ರೈಸ್ತರು ಬೇರೊಂದು ರೀತಿಯ ಅನ್ಯಾಯವನ್ನು ಎದುರಿಸಬೇಕಾಗಬಹುದು. ಅದನ್ನು ತಾಳಿಕೊಳ್ಳುವುದು ತುಂಬ ಕಷ್ಟ ಆಗಬಹುದು.

ಸಭೆಯಲ್ಲೇ ಅನ್ಯಾಯವಾದಾಗ

4. ಕ್ರೈಸ್ತರ ನಂಬಿಕೆ ಯಾವಾಗ ಪರೀಕ್ಷಿಸಲ್ಪಡುತ್ತದೆ?

4 ಹೊರಗಿನವರಿಂದ ಏನಾದರೂ ಅನ್ಯಾಯವಾಗುವುದು ಸಹಜ ಎಂದು ಕ್ರೈಸ್ತರಿಗೆ ಗೊತ್ತು. ಆದರೆ, ಸಭೆಯವರಿಂದಲೇ ಅನ್ಯಾಯವಾಗುತ್ತಿದೆ ಎಂದು ಅನಿಸಿದಾಗ ಅವರ ನಂಬಿಕೆ ಪರೀಕ್ಷಿಸಲ್ಪಡುತ್ತದೆ. ನಿಮಗೆ ಇಂಥ ಸನ್ನಿವೇಶ ಎದುರಾದರೆ ಏನು ಮಾಡುತ್ತೀರಿ? ಅದು ನಿಮ್ಮನ್ನು ಎಡವಿಸುವಂತೆ ಬಿಡುತ್ತೀರಾ?

5. ಸಭೆಯವರಿಂದ ಅನ್ಯಾಯವಾದಾಗ ನಾವೇಕೆ ಆಶ್ಚರ್ಯಪಡಬಾರದು?

5 ನಾವೆಲ್ಲರೂ ಅಪರಿಪೂರ್ಣರು ಆಗಿರುವುದರಿಂದ ತಪ್ಪು ಮಾಡುತ್ತೇವೆ. (1 ಯೋಹಾ. 1:8) ಹಾಗಾಗಿ ಸಭೆಯವರಿಂದ ನಮಗೆ ಅನ್ಯಾಯವಾಗಬಹುದು ಅಥವಾ ನಮ್ಮಿಂದ ಸಭೆಯವರಿಗೆ ಅನ್ಯಾಯವಾಗಬಹುದು. ಈ ರೀತಿ ಆಗುವುದು ಅಪರೂಪ. ಆದರೂ ಹೀಗೆ ಅನ್ಯಾಯವಾದಾಗ ನಂಬಿಗಸ್ತ ಕ್ರೈಸ್ತರು ಆಶ್ಚರ್ಯಪಡುವುದಿಲ್ಲ ಅಥವಾ ಎಡವುವುದಿಲ್ಲ. ಯೆಹೋವನು ಬೈಬಲಿನ ಮೂಲಕ ನಮಗೆ ಬೇಕಾದ ಪ್ರಾಯೋಗಿಕ ಸಲಹೆಗಳನ್ನು ಕೊಟ್ಟು, ನಮ್ಮ ಸಹೋದರ ಸಹೋದರಿಯರಿಂದ ಅನ್ಯಾಯವಾದಾಗ ನಂಬಿಗಸ್ತರಾಗಿ ಇರಲು ಸಹಾಯ ಮಾಡುತ್ತಾನೆ.—ಕೀರ್ತ. 55:12-14.

6, 7. (ಎ) ಒಬ್ಬ ಸಹೋದರನಿಗೆ ಸಭೆಯಿಂದ ಯಾವ ಅನ್ಯಾಯ ಆಯಿತು? (ಬಿ) ಈ ಸನ್ನಿವೇಶವನ್ನು ತಾಳಿಕೊಳ್ಳಲು ಅವರಿಗೆ ಯಾವುದು ಸಹಾಯ ಮಾಡಿತು?

6 ವಿಲಿ ಡಿಹಲ್‌ ಎಂಬ ಸಹೋದರನ ಉದಾಹರಣೆಯನ್ನು ಪರಿಗಣಿಸಿ. 1931ರಿಂದ ಅವರು ಸ್ವಿಟ್ಸರ್ಲೆಂಡಿನ ಬರ್ನ್‌ನಲ್ಲಿರುವ ಬೆತೆಲಿನಲ್ಲಿ ಸೇವೆ ಮಾಡಿದರು. 1946ರಲ್ಲಿ ಅವರು ಅಮೆರಿಕದ ನ್ಯೂಯಾರ್ಕಿನಲ್ಲಿ ನಡೆದ ಗಿಲ್ಯಡ್‌ ಶಾಲೆಯ 8ನೇ ತರಗತಿಗೆ ಹೋಗಿ ಪದವಿ ಪಡೆದರು. ಆಮೇಲೆ ಅವರನ್ನು ಸ್ವಿಟ್ಸರ್ಲೆಂಡಿನಲ್ಲಿ ಸಂಚರಣ ಮೇಲ್ವಿಚಾರಕರಾಗಿ ನೇಮಿಸಲಾಯಿತು. ತಾನು ಮದುವೆ ಆಗಬೇಕೆಂದಿದ್ದೇನೆ ಎಂದು ಮೇ 1949ರಲ್ಲಿ ಸ್ವಿಟ್ಸರ್ಲೆಂಡಿನ ಶಾಖಾ ಕಚೇರಿಗೆ ಬರೆದು ತಿಳಿಸಿದರು. ಆಗ ಅವರ ಎಲ್ಲಾ ಸೇವಾ ಸುಯೋಗಗಳನ್ನು ತೆಗೆಯಲಾಗುತ್ತದೆ ಎಂದು ಅಲ್ಲಿನ ಸಹೋದರರು ತಿಳಿಸಿದರು. ಅವರಿಗೆ ಪಯನೀಯರ್‌ ಸೇವೆ ಮಾತ್ರ ಮಾಡಲು ಅನುಮತಿ ಕೊಡಲಾಯಿತು. “ನನಗೆ ಭಾಷಣ ಕೊಡಲು ಅನುಮತಿ ಇರಲಿಲ್ಲ, . . . ಅನೇಕರು ನಮ್ಮನ್ನು ವಂದಿಸುತ್ತಲೂ ಇರಲಿಲ್ಲ; ನಾವು ಪಯನೀಯರರಾಗಿದ್ದಾಗ್ಯೂ, ಬಹಿಷ್ಕೃತ ವ್ಯಕ್ತಿಗಳಂತೆ ನಮ್ಮನ್ನು ಉಪಚರಿಸುತ್ತಿದ್ದರು” ಎಂದು ಅವರು ತಮ್ಮ ಜೀವನ ಕಥೆಯಲ್ಲಿ ತಿಳಿಸಿದ್ದಾರೆ.

7 ಆಗ ಸಹೋದರ ಡಿಹಲ್‌ ಏನು ಮಾಡಿದರು? “ವಿವಾಹವಾಗುವದೇನೂ ಅಶಾಸ್ತ್ರೀಯವಲ್ಲವೆಂದು ನಮಗೆ ತಿಳಿದಿತ್ತು. ಆದುದರಿಂದ ನಾವು ಪ್ರಾರ್ಥನೆಯ ಆಸರೆಯನ್ನು ಹೊಕ್ಕು ಯೆಹೋವನಲ್ಲಿ ನಮ್ಮ ಭರವಸವನ್ನು ಇಟ್ಟೆವು” ಎಂದು ಅವರು ಹೇಳುತ್ತಾರೆ. ಮದುವೆಯ ಬಗ್ಗೆ ಯೆಹೋವನ ನೋಟವನ್ನು ಕೆಲವು ಸಹೋದರರು ಸರಿಯಾಗಿ ಅರ್ಥ ಮಾಡಿಕೊಂಡಿರಲಿಲ್ಲ. ಅವರ ತಪ್ಪಾದ ನೋಟವನ್ನು ಸ್ವಲ್ಪ ಸಮಯದ ನಂತರ ತಿದ್ದಲಾಯಿತು. ಆಗ ಸಹೋದರ ಡಿಹಲ್‌ ಕಳೆದುಕೊಂಡಿದ್ದ ಸುಯೋಗಗಳನ್ನು ಮತ್ತೆ ಪಡೆದುಕೊಂಡರು. ನಿಷ್ಠೆ ತೋರಿಸಿದ್ದಕ್ಕಾಗಿ ಯೆಹೋವನು ಅವರಿಗೆ ತಕ್ಕ ಪ್ರತಿಫಲ ಕೊಟ್ಟನು. * ಒಂದುವೇಳೆ ನಮಗೆ ಈ ರೀತಿ ಅನ್ಯಾಯವಾದರೆ ಅದರ ವಿರುದ್ಧ ಹೋರಾಡುತ್ತಾ ನಾವೇ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತೇವಾ ಅಥವಾ ಯೆಹೋವನು ವಿಷಯಗಳನ್ನು ಸರಿಪಡಿಸುವವರೆಗೆ ತಾಳ್ಮೆಯಿಂದ ಕಾಯುತ್ತೇವಾ?—ಜ್ಞಾನೋ. 11:2; ಮೀಕ 7:7 ಓದಿ.

8. ನಮಗೆ ಅಥವಾ ಬೇರೆಯವರಿಗೆ ಅನ್ಯಾಯ ಆಗಿದೆ ಎಂದು ನಮಗೇಕೆ ಕೆಲವೊಮ್ಮೆ ಅನಿಸಬಹುದು?

8 ನಿಮಗೆ ಅಥವಾ ಸಭೆಯಲ್ಲಿ ಯಾರಿಗಾದರೂ ಅನ್ಯಾಯ ಆಗಿದೆ ಅಂತ ನಿಮಗನಿಸಬಹುದು. ಆದರೆ ಅದೇ ನಿಜ ಆಗಿರಲಿಕ್ಕಿಲ್ಲ. ನಾವು ಅಪರಿಪೂರ್ಣರಾಗಿರುವುದರಿಂದ ಕೆಲವೊಮ್ಮೆ ನಾವೇ ವಿಷಯಗಳನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರಬಹುದು. ನಮಗೆ ಪೂರ್ತಿ ವಿಷಯ ಗೊತ್ತಿಲ್ಲದೇ ಇರಬಹುದು. ನಮಗನಿಸಿದ್ದು ನಿಜ ಆಗಿರಲಿ ಇಲ್ಲದೇ ಇರಲಿ, ನಾವಂತೂ ಯೆಹೋವನ ಹತ್ತಿರ ಪ್ರಾರ್ಥನೆ ಮಾಡಿ ಎಲ್ಲವನ್ನೂ ಹೇಳಿಕೊಳ್ಳಬೇಕು. ಆತನಲ್ಲಿ ಭರವಸೆ ಇಟ್ಟು ನಿಷ್ಠರಾಗಿರಬೇಕು. ಹೀಗೆ ಮಾಡಿದರೆ ನಾವು ಯಾವತ್ತೂ ‘ಯೆಹೋವನ ಮೇಲೆ ಕುದಿಯುವುದಿಲ್ಲ.’—ಜ್ಞಾನೋಕ್ತಿ 19:3 ಓದಿ.

9. ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ಯಾರ ಉದಾಹರಣೆಗಳನ್ನು ನೋಡಲಿದ್ದೇವೆ?

9 ಬೈಬಲ್‌ ಕಾಲದ ಯೆಹೋವನ ಜನರಿಗೆ ಅನ್ಯಾಯವಾದ ಮೂರು ಸನ್ನಿವೇಶಗಳನ್ನು ಪರಿಗಣಿಸೋಣ. ಈ ಲೇಖನದಲ್ಲಿ, ಅಬ್ರಹಾಮನ ಮರಿಮಗನಾದ ಯೋಸೇಫನ ಬಗ್ಗೆ ಮತ್ತು ಅವನಿಗೆ ಅವನ ಅಣ್ಣಂದಿರು ಮಾಡಿದ ಅನ್ಯಾಯದ ಬಗ್ಗೆ ನೋಡಲಿದ್ದೇವೆ. ಮುಂದಿನ ಲೇಖನದಲ್ಲಿ, ಯೆಹೋವನು ರಾಜ ಅಹಾಬನೊಂದಿಗೆ ಹೇಗೆ ವ್ಯವಹರಿಸಿದನು ಮತ್ತು ಸಿರಿಯದ ಅಂತಿಯೋಕ್ಯದಲ್ಲಿ ಅಪೊಸ್ತಲ ಪೇತ್ರನಿಗೆ ಏನಾಯಿತೆಂದು ನೋಡಲಿದ್ದೇವೆ. ಈ ಉದಾಹರಣೆಗಳನ್ನು ಚರ್ಚಿಸುವಾಗ, ಈ ವಿಷಯಕ್ಕೆ ಗಮನ ಕೊಡಿ: ಅನ್ಯಾಯವಾಗಿದೆ ಎಂದು ನಿಮಗನಿಸುವಾಗ ಯೆಹೋವನ ಮೇಲೆ ಪೂರ್ಣ ಭರವಸೆ ಇಟ್ಟು ಆತನೊಂದಿಗಿನ ಸಂಬಂಧವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು?

ಯೋಸೇಫನಿಗೆ ಅನ್ಯಾಯವಾದಾಗ

10, 11. (ಎ) ಯೋಸೇಫನಿಗೆ ಯಾವೆಲ್ಲಾ ಅನ್ಯಾಯವಾಯಿತು? (ಬಿ) ಸೆರೆಮನೆಯಲ್ಲಿದ್ದಾಗ ಅವನಿಗೆ ಯಾವ ಅವಕಾಶ ಸಿಕ್ಕಿತು?

10 ಯೆಹೋವನ ನಂಬಿಗಸ್ತ ಸೇವಕನಾದ ಯೋಸೇಫನಿಗೆ ಅಪರಿಚಿತರಿಂದ ತುಂಬ ಅನ್ಯಾಯವಾಗಿತ್ತು. ಆದರೆ ಅವನಿಗೆ ಹೆಚ್ಚು ನೋವಾಗಿದ್ದು, ತನ್ನ ಸ್ವಂತ ಅಣ್ಣಂದಿರೇ ಅನ್ಯಾಯ ಮಾಡಿದಾಗ. ಯೋಸೇಫ 17 ವರ್ಷದವನಾಗಿದ್ದಾಗ ಅವನ ಅಣ್ಣಂದಿರು ಅವನನ್ನು ದಾಸನಾಗಿ ಮಾರಿಬಿಟ್ಟರು. ಆಮೇಲೆ ಅವನನ್ನು ಐಗುಪ್ತ ದೇಶಕ್ಕೆ ಕರೆದುಕೊಂಡು ಹೋಗಲಾಯಿತು. (ಆದಿ. 37:23-28; 42:21) ಅಲ್ಲಿ ಅವನ ಮೇಲೆ ಒಂದು ಸುಳ್ಳು ಆರೋಪ ಹಾಕಲಾಯಿತು. ಒಬ್ಬ ಸ್ತ್ರೀಯನ್ನು ಬಲಾತ್ಕರಿಸಲು ಪ್ರಯತ್ನಿಸಿದ ಎಂದು ಹೇಳಿ ಯಾವುದೇ ವಿಚಾರಣೆ ಮಾಡದೆ ಅವನನ್ನು ಸೆರೆಮನೆಗೆ ತಳ್ಳಲಾಯಿತು. (ಆದಿ. 39:17-20) ಹೀಗೆ ಯೋಸೇಫ ದಾಸನಾಗಿ ದುಡಿಯುತ್ತಾ, ಸೆರೆಮನೆಯಲ್ಲಿ ಕೊಳೆಯುತ್ತಾ 13 ವರ್ಷ ಕಷ್ಟಪಟ್ಟ. ನಮ್ಮ ಸಹೋದರ ಸಹೋದರಿಯರಿಂದ ನಮಗೆ ಅನ್ಯಾಯವಾದಾಗ ನಾವೇನು ಮಾಡಬೇಕು ಎಂದು ಯೋಸೇಫನಿಂದ ಕಲಿಯಬಹುದು.

11 ಯೋಸೇಫನು ಸೆರೆಮನೆಯಲ್ಲಿದ್ದಾಗ ಅರಸನ ಪಾನದಾಯಕನನ್ನೂ ಸೆರೆಮನೆಗೆ ಹಾಕಲಾಯಿತು. ಒಂದು ರಾತ್ರಿ ಆ ಪಾನದಾಯಕನಿಗೆ ಕನಸು ಬಿತ್ತು. ಯೋಸೇಫನು ಯೆಹೋವನ ಸಹಾಯದಿಂದ ಆ ಕನಸಿನ ಅರ್ಥವನ್ನು ವಿವರಿಸಿದನು. ಆ ಪಾನದಾಯಕನು ಸೆರೆಮನೆಯಿಂದ ಬಿಡುಗಡೆಯಾಗಿ ಪುನಃ ಫರೋಹನ ಹತ್ತಿರ ಕೆಲಸ ಮಾಡುವನೆಂದು ಯೋಸೇಫ ತಿಳಿಸಿದನು. ನಂತರ ತನಗಾದ ಅನ್ಯಾಯದ ಬಗ್ಗೆಯೂ ಅವನಿಗೆ ಹೇಳಿದನು. ಆಗ ಯೋಸೇಫನು ಏನು ಹೇಳಿದನು, ಏನು ಹೇಳಲಿಲ್ಲ ಎಂಬ ವಿಷಯದಿಂದಲೂ ನಾವು ಪಾಠ ಕಲಿಯಬಹುದು.—ಆದಿ. 40:5-13.

12, 13. (ಎ) ಯೋಸೇಫ ತನಗಾದ ಅನ್ಯಾಯವನ್ನು ಸಹಿಸಿಕೊಂಡು ಸುಮ್ಮನಿರಲಿಲ್ಲ ಎಂದು ಹೇಗೆ ಹೇಳಬಹುದು? (ಬಿ) ಯೋಸೇಫನು ಪಾನದಾಯಕನಿಗೆ ಯಾವ ವಿಷಯವನ್ನು ಹೇಳಲಿಲ್ಲ?

12 ಆದಿಕಾಂಡ 40:14, 15 ಓದಿ. ತನ್ನನ್ನು “ಕದ್ದು” ತರಲಾಯಿತು ಅಥವಾ ಅಪಹರಿಸಲಾಯಿತು ಎಂದು ಯೋಸೇಫ ಹೇಳಿದನು. ತಾನು ತಪ್ಪು ಮಾಡಿಲ್ಲದಿದ್ದರೂ ಸುಳ್ಳಾರೋಪ ಹಾಕಿ ಅವನನ್ನು ಜೈಲಿಗೆ ತಳ್ಳಲಾಯಿತೆಂದು ತಿಳಿಸಿದನು. ಅವನಿಗೆ ಒಂದರ ಮೇಲೊಂದು ಅನ್ಯಾಯವಾಗಿತ್ತು. ಆದ್ದರಿಂದಲೇ ತನ್ನ ಕುರಿತು ಫರೋಹನೊಟ್ಟಿಗೆ ಮಾತಾಡುವಂತೆ ಪಾನದಾಯಕನಿಗೆ ಹೇಳಿದನು. ಫರೋಹನು ‘ತನ್ನನ್ನು ಸೆರೆಯಿಂದ ಬಿಡಿಸಬೇಕು’ ಎಂಬ ಉದ್ದೇಶದಿಂದಲೇ ಅದನ್ನವನಿಗೆ ತಿಳಿಸಿದನು.

13 ನನ್ನ ಜೀವನ ಇಷ್ಟೇ ಎಂದು ಯೋಸೇಫ ಕೈಚೆಲ್ಲಿ ಕೂರಲಿಲ್ಲ. ತನಗೆ ಎಷ್ಟೋ ಅನ್ಯಾಯವಾಗಿದೆ ಎಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಪಾನದಾಯಕನು ತನಗೆ ಸಹಾಯ ಮಾಡಲು ಸಾಧ್ಯ ಎಂದು ಅವನಿಗನಿಸಿತು. ಆದ್ದರಿಂದಲೇ ತನ್ನ ಪರಿಸ್ಥಿತಿಯನ್ನು ಅವನಿಗೆ ವಿವರಿಸಿದನು. ಆದರೆ ಅಣ್ಣಂದಿರೇ ತನ್ನನ್ನು ಅಪಹರಿಸಿದರೆಂದು ಯಾರಿಗೂ ಹೇಳಲಿಲ್ಲ, ಫರೋಹನಿಗೆ ಸಹ ಹೇಳಲಿಲ್ಲ. ಇದರಿಂದ ಯೋಸೇಫನ ಅಣ್ಣಂದಿರು ಐಗುಪ್ತಕ್ಕೆ ಬಂದು ಅವನೊಂದಿಗೆ ಸಮಾಧಾನ ಮಾಡಿಕೊಂಡಾಗ ಫರೋಹನು ಅವರನ್ನು ಸಂತೋಷದಿಂದ ಬರಮಾಡಿಕೊಂಡು ಐಗುಪ್ತ ‘ದೇಶದಲ್ಲಿದ್ದ ಉತ್ತಮವಸ್ತುಗಳನ್ನು’ ಕೊಟ್ಟನು.—ಆದಿ. 45:16-20.

ಬೇರೆಯವರ ಬಗ್ಗೆ ತಪ್ಪಾಗಿ ಮಾತಾಡಿದರೆ ಉರಿಯುವ ಬೆಂಕಿಗೆ ಸೀಮೆಎಣ್ಣೆ ಸುರಿದಂತೆ (ಪ್ಯಾರ 14 ನೋಡಿ)

14. ಸಭೆಯವರಿಂದ ಅನ್ಯಾಯವಾದಾಗ ಅವರ ಬಗ್ಗೆ ಕೆಟ್ಟದಾಗಿ ಮಾತಾಡದೆ ಇರಲು ನಮಗೆ ಯಾವ ಗುಣ ಸಹಾಯ ಮಾಡುತ್ತದೆ?

14 ಸಭೆಯವರಿಂದ ಅನ್ಯಾಯವಾಗಿದೆ ಎಂದು ನಮಗನಿಸುವುದಾದರೆ ನಾವು ಅವರ ಬಗ್ಗೆ ಚಾಡಿ ಹೇಳಬಾರದು. ಆದರೆ ಒಬ್ಬ ಸಹೋದರನು ಗಂಭೀರವಾದ ತಪ್ಪು ಮಾಡಿರುವಲ್ಲಿ ಅದರ ಬಗ್ಗೆ ಹಿರಿಯರಿಗೆ ತಿಳಿಸಬೇಕು, ಅವರ ಸಲಹೆ ಪಡೆಯಬೇಕು. (ಯಾಜ. 5:1) ಆದರೆ ಗಂಭೀರ ತಪ್ಪೇನು ನಡೆದಿಲ್ಲದ ಹೆಚ್ಚಿನ ಸಂದರ್ಭಗಳಲ್ಲಿ, ಅದರ ಬಗ್ಗೆ ಯಾರಿಗೂ ಹೇಳದೆ, ಹಿರಿಯರಿಗೂ ಹೇಳದೆ ನಮ್ಮನಮ್ಮಲ್ಲೇ ಸರಿಮಾಡಿಕೊಳ್ಳುವುದು ಒಳ್ಳೇದು. (ಮತ್ತಾಯ 5:23, 24; 18:15 ಓದಿ.) ಇಂಥ ಸನ್ನಿವೇಶಗಳಲ್ಲಿ ಬೈಬಲಿನ ತತ್ವಗಳನ್ನು ಅನ್ವಯಿಸಿಕೊಂಡು ನಿಷ್ಠರಾಗಿರೋಣ. ಸ್ವಲ್ಪ ಸಮಯದ ನಂತರ, ನಾವಂದುಕೊಂಡಂತೆ ಅನ್ಯಾಯವೇನೂ ಆಗಿಲ್ಲ, ನಾವೇ ತಪ್ಪಾಗಿ ಅರ್ಥಮಾಡಿಕೊಂಡಿದ್ದೇವೆ ಎಂದು ಗೊತ್ತಾಗಬಹುದು. ಆಗ ನಮ್ಮ ಸಹೋದರನ ಬಗ್ಗೆ ಬೇರೆಯವರ ಹತ್ತಿರ ಕೆಟ್ಟದಾಗಿ ಮಾತಾಡದೆ ಒಳ್ಳೇ ಕೆಲಸ ಮಾಡಿದೆ ಎಂದು ನಮಗೆ ಸಂತೋಷವಾಗುವುದು. ನಾವಂದುಕೊಂಡಂತೆ ಅನ್ಯಾಯವಾಗಿರಲಿ ಇಲ್ಲದಿರಲಿ ನೋವಾಗುವ ರೀತಿಯಲ್ಲಿ ಮಾತಾಡುವುದರಿಂದ ಉರಿಯುವ ಬೆಂಕಿಗೆ ಸೀಮೆಎಣ್ಣೆ ಸುರಿದಂತೆ ಆಗುತ್ತದೆ. ಯೆಹೋವನಿಗೆ ಮತ್ತು ನಮ್ಮ ಸಹೋದರ ಸಹೋದರಿಯರಿಗೆ ನಿಷ್ಠರಾಗಿರುವುದಾದರೆ ನಾವು ಈ ರೀತಿ ಮಾಡುವುದಿಲ್ಲ. ‘ಸಜ್ಜನನು ಚಾಡಿಯನ್ನು ಹೇಳದವನೂ ಮತ್ತೊಬ್ಬರಿಗೆ ಅನ್ಯಾಯಮಾಡದವನೂ ಆಗಿರುತ್ತಾನೆ’ ಎಂದು ಕೀರ್ತನೆಗಾರನು ಹೇಳಿದ್ದಾನೆ.—ಕೀರ್ತ. 15:2, 3; ಯಾಕೋ. 3:5.

ಬೇರೆ ಎಲ್ಲದಕ್ಕಿಂತ ಯೆಹೋವನೊಂದಿಗಿರುವ ಸಂಬಂಧ ಮುಖ್ಯ

15. ಯೆಹೋವನ ಜೊತೆ ಯೋಸೇಫನಿಗಿದ್ದ ಸಂಬಂಧದಿಂದ ಯಾವ ಆಶೀರ್ವಾದ ಸಿಕ್ಕಿತು?

15 ಯೋಸೇಫನಿಂದ ನಾವು ಇನ್ನೊಂದು ಮುಖ್ಯ ಪಾಠವನ್ನು ಕಲಿಯಬಹುದು. 13 ವರ್ಷ ಅವನು ಕಷ್ಟಪಡಬೇಕಾಯಿತು. ಅಷ್ಟು ಸಮಯ ಅವನು ಯೆಹೋವನು ಯಾವ ರೀತಿ ಯೋಚಿಸುತ್ತಾನೋ ಅದೇ ರೀತಿ ಯೋಚಿಸಿದನೆಂದು ತೋರಿಸಿಕೊಟ್ಟನು. (ಆದಿ. 45:5-8) ತನ್ನ ಈ ಪಾಡಿಗೆ ಯೆಹೋವನೇ ಕಾರಣ ಎಂದು ಅವನು ಯಾವತ್ತೂ ದೂರಲಿಲ್ಲ. ತನಗಾದ ಅನ್ಯಾಯವನ್ನು ಮರೆಯಲಿಲ್ಲವಾದರೂ ಅದರ ಬಗ್ಗೆ ಯೋಚಿಸುತ್ತಾ ದ್ವೇಷ ಬೆಳೆಸಿಕೊಳ್ಳಲಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ, ಅವನು ಇತರರ ತಪ್ಪು ಅಥವಾ ಬಲಹೀನತೆಗಳು ತನ್ನ ಮತ್ತು ಯೆಹೋವನ ಸಂಬಂಧವನ್ನು ಹಾಳುಮಾಡಲು ಬಿಡಲಿಲ್ಲ. ಯೋಸೇಫನು ನಿಷ್ಠನಾಗಿದ್ದರಿಂದ ಅವನಿಗಾದ ಅನ್ಯಾಯವನ್ನು ಯೆಹೋವನು ಸರಿಮಾಡಿ ಅವನನ್ನೂ ಅವನ ಕುಟುಂಬವನ್ನೂ ಆಶೀರ್ವದಿಸಿದನು.

16. ಸಭೆಯವರಿಂದ ಅನ್ಯಾಯವಾದಾಗ ನಾವೇಕೆ ಯೆಹೋವನಿಗೆ ಹತ್ತಿರವಾಗಬೇಕು?

16 ಯೆಹೋವನ ಜೊತೆ ನಮಗಿರುವ ಸಂಬಂಧವನ್ನು ಅಮೂಲ್ಯವೆಂದು ಎಣಿಸಬೇಕು, ಅದನ್ನು ಕಾಪಾಡಿಕೊಳ್ಳಬೇಕು. ನಮ್ಮ ಸಹೋದರರ ಬಲಹೀನತೆ ನೋಡಿ ನಾವು ಪ್ರೀತಿಸುವ ಮತ್ತು ಆರಾಧಿಸುವ ಯೆಹೋವ ದೇವರಿಂದ ದೂರ ಹೋಗಬಾರದು. (ರೋಮ. 8:38, 39) ಬದಲಿಗೆ, ಸಭೆಯವರಿಂದ ನಮಗೆ ಅನ್ಯಾಯವಾದರೆ ಯೋಸೇಫನಂತೆ ನಾವು ಯೆಹೋವನಿಗೆ ಇನ್ನೂ ಹತ್ತಿರವಾಗಬೇಕು. ಯೆಹೋವನು ಯೋಚಿಸುವಂತೆಯೇ ಯೋಚಿಸಲು ಪ್ರಯತ್ನಿಸಬೇಕು. ಬೈಬಲ್‌ ತತ್ವಗಳನ್ನು ಪಾಲಿಸುತ್ತಾ ಸಮಸ್ಯೆಯನ್ನು ಸರಿಪಡಿಸಲು ನಮ್ಮಿಂದ ಆದ ಎಲ್ಲವನ್ನು ಮಾಡಿದ ಮೇಲೆ ಅದನ್ನು ಯೆಹೋವನ ಕೈಯಲ್ಲಿ ಬಿಟ್ಟುಬಿಡಬೇಕು. ಆತನು ಖಂಡಿತವಾಗಿಯೂ ಅದನ್ನು ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಸರಿಮಾಡುತ್ತಾನೆ ಎಂದು ಭರವಸೆ ಇಡಬೇಕು.

‘ಸರ್ವಲೋಕದ ನ್ಯಾಯಾಧಿಪತಿಯಲ್ಲಿ’ ಭರವಸೆ ಇಡಿ

17. ‘ಸರ್ವಲೋಕದ ನ್ಯಾಯಾಧಿಪತಿಯಲ್ಲಿ’ ನಮಗೆ ಭರವಸೆ ಇದೆ ಎಂದು ಹೇಗೆ ತೋರಿಸಬಹುದು?

17 ಈ ದುಷ್ಟ ಲೋಕದಲ್ಲಿ ಜೀವಿಸುವಾಗ ಅನ್ಯಾಯವಾಗುವುದು ಸಹಜ. ಕೆಲವೊಮ್ಮೆ ಸಭೆಯಲ್ಲಿ ಸಹ ಅನ್ಯಾಯವಾಗುತ್ತಿದೆ ಎಂದು ಅನಿಸಬಹುದು. ಆಗ ಎಡವಬೇಡಿ. (ಕೀರ್ತ. 119:165) ಯೆಹೋವನಿಗೆ ನಿಷ್ಠರಾಗಿದ್ದು, ಸಹಾಯಕ್ಕಾಗಿ ಪ್ರಾರ್ಥಿಸಿ ಮತ್ತು ಆತನ ಮೇಲೆ ಆತುಕೊಳ್ಳಿ. ನಾವೆಲ್ಲರೂ ಅಪರಿಪೂರ್ಣರಾಗಿರುವುದರಿಂದ ಅನ್ಯಾಯ ಆಗಿದೆ ಎಂದು ತಪ್ಪಾಗಿ ಅರ್ಥಮಾಡಿಕೊಂಡಿರಬಹುದು. ಕೆಲವೊಮ್ಮೆ ನಮಗೆ ಪೂರ್ತಿ ವಿಷಯ ಗೊತ್ತಿಲ್ಲದಿರಬಹುದು. ಯೋಸೇಫನನ್ನು ಅನುಕರಿಸಿ. ಬೇರೆಯವರ ಬಗ್ಗೆ ತಪ್ಪಾಗಿ ಮಾತಾಡಬೇಡಿ. ಯಾಕೆಂದರೆ ಹಾಗೆ ಮಾತಾಡಿದರೆ ಉರಿಯುವ ಬೆಂಕಿಗೆ ಸೀಮೆಎಣ್ಣೆ ಸುರಿದಂತಾಗುತ್ತದೆ. ನೀವೇ ಸಮಸ್ಯೆಯನ್ನು ಸರಿಮಾಡಲು ಪ್ರಯತ್ನಿಸುವ ಬದಲು ಯೆಹೋವನಿಗೆ ನಿಷ್ಠರಾಗಿದ್ದು ಆತನು ಅದನ್ನು ಸರಿಮಾಡುವವರೆಗೆ ತಾಳ್ಮೆಯಿಂದ ಕಾಯಿರಿ. ಆಗ ಆತನು ಯೋಸೇಫನನ್ನು ಆಶೀರ್ವದಿಸಿದಂತೆ ನಿಮ್ಮನ್ನೂ ಆಶೀರ್ವದಿಸುತ್ತಾನೆ. ‘ಸರ್ವಲೋಕದ ನ್ಯಾಯಾಧಿಪತಿಯಾದ’ ಯೆಹೋವನು ‘ನ್ಯಾಯವನ್ನೇ ನಡಿಸುತ್ತಾನೆ’ ಎಂಬ ಭರವಸೆ ನಿಮಗಿರಲಿ.—ಆದಿ. 18:25; ಧರ್ಮೋ. 32:4.

18. ಮುಂದಿನ ಲೇಖನದಲ್ಲಿ ನಾವೇನನ್ನು ಕಲಿಯಲಿದ್ದೇವೆ?

18 ಬೈಬಲ್‌ ಕಾಲದಲ್ಲಿ ಯೆಹೋವನ ಜನರಿಗೆ ಅನ್ಯಾಯವಾದ ಇನ್ನೂ ಎರಡು ಉದಾಹರಣೆಗಳನ್ನು ಮುಂದಿನ ಲೇಖನದಲ್ಲಿ ನೋಡಲಿದ್ದೇವೆ. ನ್ಯಾಯದ ಬಗ್ಗೆ ಯೆಹೋವನು ಯೋಚಿಸುವಂತೆಯೇ ಯೋಚಿಸಲು ದೀನತೆ ಮತ್ತು ಕ್ಷಮಾಗುಣ ನಮಗೆ ಹೇಗೆ ಸಹಾಯಮಾಡುತ್ತದೆ ಎಂದು ಇವುಗಳಿಂದ ಕಲಿಯಲಿದ್ದೇವೆ.

^ ಪ್ಯಾರ. 7 ಫೆಬ್ರವರಿ 1, 1992ರ ಕಾವಲಿನಬುರುಜುವಿನಲ್ಲಿ ವಿಲಿ ಡಿಹಲ್‌ರ “ಯೆಹೋವನು ನಾನು ಭರವಸವಿಡುವ ನನ್ನ ದೇವರು” ಎಂಬ ಜೀವನ ಕಥೆಯನ್ನು ನೋಡಿ.