ಕಾರ್ಬನ್- ಒಂದು ಅದ್ಭುತ
“ಜೀವ ರೂಪುಗೊಳ್ಳಲು ಕಾರ್ಬನ್‌ಗಿಂತ ಹೆಚ್ಚು ಅಗತ್ಯವಿರುವ ವಸ್ತು ಬೇರೊಂದಿಲ್ಲ” ಎಂದು ನೇಚರ್ಸ್ ಬಿಲ್ಡಿಂಗ್ ಬ್ಲಾಕ್ಸ್ ಎಂಬ ಪುಸ್ತಕ ಹೇಳಿದೆ. ಕಾರ್ಬನ್ ತನ್ನೊಂದಿಗೇ ಮತ್ತು ಇತರ ರಾಸಾಯನಿಕ ಧಾತುಗಳೊಂದಿಗೆ ಸಂಯೋಜನೆಗೊಳ್ಳುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಅದು ಲಕ್ಷಾಂತರ ಸಂಯುಕ್ತ ವಸ್ತುಗಳಾಗಿ ಮಾರ್ಪಡುತ್ತದೆ. ಈ ರೀತಿಯ ವಸ್ತುಗಳನ್ನು ಇನ್ನೂ ಕಂಡುಹಿಡಿಯುತ್ತಾ ಉತ್ಪಾದಿಸುತ್ತಾ ಇದ್ದಾರೆ.
ಕಾರ್ಬನ್ ಅಣುಗಳು ಸಂಯೋಜನೆಗೊಂಡು ಸರಪಣಿ, ಪಿರಮಿಡ್, ಬಳೆ, ಹಾಳೆ ಮತ್ತು ಕೊಳವೆಯಂಥ ಬೇರೆ ಬೇರೆ ಆಕಾರಗಳಲ್ಲಿ ರೂಪುಗೊಳ್ಳುತ್ತವೆ. ಇಂಥ ವೈಶಿಷ್ಟ್ಯವಿರುವ ಕಾರ್ಬನ್ ನಿಜಕ್ಕೂ ಒಂದು ಅದ್ಭುತವೇ ಸರಿ! ◼ (g16-E No. 5)
ವಜ್ರ
ಕಾರ್ಬನ್ ಪರಮಾಣುಗಳು ಪಿರಮಿಡ್ ಅಥವಾ ಟೆಟ್ರಾಹೆಡ್ರಾನ್ ಆಕಾರದಲ್ಲಿ ರೂಪುಗೊಂಡಾಗ ಅದು ಬಹಳ ಗಟ್ಟಿಯಾದ ಆಕೃತಿಯನ್ನು ನಿರ್ಮಿಸುತ್ತವೆ. ಆದ್ದರಿಂದ ವಜ್ರ ಅತೀ ಕಠಿಣವಾದ ನೈಸರ್ಗಿಕ ವಸ್ತು. ಅಪ್ಪಟ ವಜ್ರವು ಕಾರ್ಬನ್ ಪರಮಾಣುಗಳ ಒಂದೇ ಅಣುವಾಗಿರುತ್ತದೆ.
ಗ್ರಾಫೈಟ್
ಇದರಲ್ಲಿ ಕಾರ್ಬನ್ ಪರಮಾಣುಗಳು ಒತ್ತೊತ್ತಾಗಿ ಪದರಗಳಂತೆ ಸಂಯೋಜಿಸಲ್ಪಟ್ಟಿದ್ದು, ಒಂದು ಪದರಕ್ಕೂ ಇನ್ನೊಂದು ಪದರಕ್ಕೂ ಮಧ್ಯೆ ಹೆಚ್ಚು ಒತ್ತಾಗಿ ಸಂಯೋಜನೆಯಾಗಿರುವುದಿಲ್ಲ. ಇವುಗಳಿಗೆ ಹಾಳೆಗಳಂತೆ ಸರಿದು ಬರುವ ಸಾಮರ್ಥ್ಯವಿದೆ. ಈ ಲಕ್ಷಣದಿಂದಾಗಿ ಗ್ರಾಫೈಟ್ ಒಳ್ಳೆಯ ಲೂಬ್ರಿಕೆಂಟ್ ಮತ್ತು ಪೆನ್ಸಿಲಿನ ಸೀಸದಲ್ಲಿ ಉಪಯೋಗಿಸಲಾಗುವ ಪ್ರಮುಖ ವಸ್ತುವಾಗಿದೆ. a
ಗ್ರಾಫೀನ್
ಇದು ಕಾರ್ಬನ್ ಪರಮಾಣುಗಳ ಷಡ್ಭುಜಾಕೃತಿಯ ಜಾಲರಿಯಂತಿರುವ ಒಂದೇ ಪದರವಾಗಿದೆ. ಇದಕ್ಕೆ ಕಬ್ಬಿಣಕ್ಕಿಂತ ಹೆಚ್ಚು ಒತ್ತಡವನ್ನು ಸಹಿಸುವ ಶಕ್ತಿಯಿದೆ. ಪೆನ್ಸಿಲಿನಲ್ಲಿ ಕಡಿಮೆ ಪ್ರಮಾಣದ ಒಂದು ಅಥವಾ ಹೆಚ್ಚು ಪದರಗಳ ಗ್ರಾಫೀನಿರುತ್ತದೆ.
ಫುಲ್ಲರೀನ್ಸ್
ಇವು ಕಾರ್ಬನಿನ ಟೊಳ್ಳಾದ ಅಣುಗಳಾಗಿದ್ದು, ಅತಿ ಸೂಕ್ಷ್ಮವಾದ ಚೆಂಡಿನ ಮತ್ತು ಕೊಳವೆ ಆಕಾರದಲ್ಲಿರುತ್ತವೆ. ಈ ಕೊಳವೆಗಳನ್ನು ನ್ಯಾನೋಟ್ಯೂಬುಗಳೆಂದು ಕರೆಯುತ್ತಾರೆ. ಇವುಗಳನ್ನು ನ್ಯಾನೋಮೀಟರ್‌ಗಳಲ್ಲಿ ಅಳೆಯುತ್ತಾರೆ. ಒಂದು ಮೀಟರನ್ನು ನೂರು ಕೋಟಿ ಭಾಗಗಳಾಗಿ ವಿಂಗಡಿಸಿದಾಗ ಸಿಗುವ ಒಂದಂಶವೇ ನ್ಯಾನೋಮೀಟರ್.
ಸಜೀವ ವಸ್ತುಗಳು
ಸಸ್ಯಗಳ, ಪ್ರಾಣಿಗಳ ಮತ್ತು ಮಾನವರ ಜೀವಕೋಶಗಳು ಕಾರ್ಬನಿನಿಂದ ರಚಿತವಾಗಿವೆ. ಈ ಕಾರ್ಬನ್‌ಗಳನ್ನು ಕಾರ್ಬೋಹೈಡ್ರೇಟ್ಸ್, ಕೊಬ್ಬು ಮತ್ತು ಅಮೀನೋ ಆ್ಯಸಿಡ್ಗಳಲ್ಲಿ ಕಾಣಬಹುದು.
‘ದೇವರ ಅದೃಶ್ಯ ಗುಣಗಳನ್ನು ಸೃಷ್ಟಿಯಿಂದ ಗ್ರಹಿಸಲಾಗುತ್ತದೆ.’—ರೋಮನ್ನರಿಗೆ 1:20.
a 2007, ಅಕ್ಟೋಬರ್-ಡಿಸೆಂಬರ್ ತಿಂಗಳ ಎಚ್ಚರ! ಪತ್ರಿಕೆಯಲ್ಲಿನ “ಸ್ವಲ್ಪ ಪೆನ್ಸಿಲ್ ಕೊಡುತ್ತೀರಾ?” ಎಂಬ ಲೇಖನ ನೋಡಿ.