ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮಕ್ಕಳು ಯಾವ ಕಡೆಗೆ ಹೋಗಬೇಕೆಂದು ನೀವು ಮಾದರಿ ಇಡುತ್ತಿದ್ದೀರಾ?

ಹೆತ್ತವರಿಗಾಗಿ

8: ಮಾದರಿ

8: ಮಾದರಿ

ಅರ್ಥವೇನು?

ಒಳ್ಳೇ ಮಾದರಿಯಿಡುವ ಹೆತ್ತವರು ಮಕ್ಕಳಿಗೆ ಕಲಿಸಿದ್ದನ್ನು ಸ್ವತಃ ಪಾಲಿಸುತ್ತಾರೆ. ನೆನಸಿ, ಮನೆಯ ಹತ್ತಿರ ಬಂದ ಒಬ್ಬರ ಜೊತೆ ಮಾತಾಡಲು ನಿಮಗಿಷ್ಟವಿಲ್ಲದಿದ್ದಾಗ, “ನಾನ್‌ ಮನೆಯಲ್ಲಿಲ್ಲ ಅಂತ ಹೇಳು” ಎನ್ನುವುದನ್ನು ನಿಮ್ಮ ಮಗ ಕೇಳಿಸಿಕೊಳ್ಳುತ್ತಾನೆ. ಹಾಗಿರುವಾಗ ಅವನು ಯಾವಾಗಲೂ ಸತ್ಯ ಹೇಳಬೇಕು ಎಂದು ನೀವು ನಿರೀಕ್ಷಿಸಲಿಕ್ಕಾಗುತ್ತದಾ?

“ಸಾಮಾನ್ಯವಾಗಿ ಜನ, ‘ನಾನು ಹೇಳಿದಂತೆ ಮಾಡು, ಮಾಡಿದಂತೆ ಮಾಡಬೇಡ’ ಎಂದು ಹೇಳುತ್ತಾರೆ. ಈ ಮಾತು ಮಕ್ಕಳ ವಿಷಯದಲ್ಲಿ ನಡೆಯುವುದಿಲ್ಲ. ನಾವು ಹೇಳುವ, ಮಾಡುವ ಪ್ರತಿಯೊಂದನ್ನೂ ಅವರು ಸ್ಪಂಜಿನಂತೆ ಹೀರಿಕೊಳ್ಳುತ್ತಾರೆ. ನಾವು ಮಾಡುವುದಕ್ಕೂ ಕಲಿಸುವುದಕ್ಕೂ ಹೊಂದಿಕೆಯಿಲ್ಲದಿದ್ದರೆ ಅದನ್ನೂ ಹೇಳಿಬಿಡುತ್ತಾರೆ.”—ಡೇವಿಡ್‌.

ಬೈಬಲ್‌ ತತ್ವ: “‘ಕದಿಯಬಾರದು’ ಎಂದು ಸಾರುವ ನೀನು ಕದಿಯುತ್ತೀಯೊ?”—ರೋಮನ್ನರಿಗೆ 2:21.

ಯಾಕೆ ಮುಖ್ಯ?

ಎಲ್ಲಾ ಮಕ್ಕಳು, ಹದಿವಯಸ್ಸಿನವರು ಸಹ ಬೇರಾರಿಗಿಂತಲೂ ಹೆಚ್ಚಾಗಿ ಹೆತ್ತವರಿಂದ ಪ್ರಭಾವಿತರಾಗುತ್ತಾರೆ. ಅವರ ಸಮ ಪ್ರಾಯದವರಿಂದಲೂ ಅಷ್ಟು ಪ್ರಭಾವಿತರಾಗುವುದಿಲ್ಲ. ಇದರರ್ಥ ನಿಮ್ಮ ಮಕ್ಕಳನ್ನು ಸರಿಯಾಗಿ ಮಾರ್ಗದರ್ಶಿಸಲು ಸಾಧ್ಯವಿರುವ ಅತ್ಯುತ್ತಮ ವ್ಯಕ್ತಿ ನೀವೇ! ಆದರೆ ಹೀಗೆ ಮಾರ್ಗದರ್ಶಿಸಲು ನೀವು ನುಡಿದಂತೆ ನಡೆಯಲೇಬೇಕು.

“ಒಂದು ವಿಷಯವನ್ನು ನಾವು ನೂರು ಸಾರಿ ಹೇಳಿದ ನಂತರವೂ ಮಕ್ಕಳು ಅದನ್ನು ಕಿವಿಗೆ ಹಾಕಿಕೊಂಡಿದ್ದಾರಾ ಅಂತ ಸಂಶಯ ಬರಬಹುದು. ಆದರೆ ಹೇಳಿದಂತೆ ನಡೆಯಲು ನಾವು ಒಮ್ಮೆ ತಪ್ಪಿಹೋದರೆ ಸಾಕು ಅದನ್ನು ಮಕ್ಕಳು ಗಮನಿಸಿ ಹೇಳುತ್ತಾರೆ. ನಾವು ಮಾಡುವುದೆಲ್ಲವನ್ನೂ ಗಮನಿಸುತ್ತಿರುತ್ತಾರೆ. ಅವರು ಗಮನಿಸ್ತಿಲ್ಲ ಅಂತ ನಾವು ನೆನಸುವಾಗಲೂ ಗಮನಿಸುತ್ತಿರುತ್ತಾರೆ.”—ನಿಕೋಲ್‌.

ಬೈಬಲ್‌ ತತ್ವ: ‘ಮೇಲಣಿಂದ ಬರುವ ವಿವೇಕದಲ್ಲಿ ಕಪಟವಿಲ್ಲ.’—ಯಾಕೋಬ 3:17.

ನೀವೇನು ಮಾಡಬಹುದು?

ನೀವೇನು ಮಾಡುತ್ತಿದ್ದೀರೆಂದು ಪರೀಕ್ಷಿಸಿಕೊಳ್ಳಿ. ಎಂಥ ಮನೋರಂಜನೆಯನ್ನು ನೀವು ನೋಡುತ್ತೀರಿ? ಸಂಗಾತಿ, ಮಕ್ಕಳೊಟ್ಟಿಗೆ ಹೇಗೆ ನಡೆದುಕೊಳ್ಳುತ್ತೀರಿ? ನಿಮ್ಮ ಮಿತ್ರರು ಎಂಥವರು? ನೀವು ಬೇರೆಯವರಿಗೆ ಕಾಳಜಿ, ಚಿಂತೆ ತೋರಿಸುತ್ತೀರಾ? ಚುಟುಕಾಗಿ ಹೇಳುವಲ್ಲಿ, ನಿಮ್ಮ ಮಕ್ಕಳು ಎಂಥವರಾಗಬೇಕೆಂದು ಬಯಸುತ್ತೀರೊ ನೀವು ಅಂಥವರಾಗಿದ್ದೀರಾ?

“ನಾನೂ ನನ್ನ ಗಂಡ ಪಾಲಿಸದಂಥ ಮಟ್ಟವನ್ನು ನಾವು ಮಕ್ಕಳಿಗೆ ಇಡುವುದಿಲ್ಲ.”—ಕ್ರಿಸ್ಟೀನ್‌.

ನಿಮ್ಮಿಂದ ತಪ್ಪಾದಾಗ ಕ್ಷಮೆ ಕೇಳಿ. ನೀವು ಪರಿಪೂರ್ಣರಲ್ಲ ಅಂತ ನಿಮ್ಮ ಮಕ್ಕಳಿಗೆ ಗೊತ್ತೇ ಇದೆ. ಹಾಗಾಗಿ ಸೂಕ್ತವಾಗಿರುವಾಗೆಲ್ಲ, “ತಪ್ಪಾಯ್ತು, ಕ್ಷಮಿಸಿ” ಅಂತ ನೀವು ಸಂಗಾತಿಗೆ, ಮಕ್ಕಳಿಗೆ ಹೇಳುವಾಗ ಅವರು ಪ್ರಾಮಾಣಿಕತೆ ಹಾಗೂ ದೀನತೆಯ ಬಗ್ಗೆ ಅಮೂಲ್ಯ ಪಾಠ ಕಲಿಯುತ್ತಾರೆ.

“ನಾವು ತಪ್ಪುಮಾಡಿದಾಗ ಅದನ್ನು ಒಪ್ಪಿಕೊಳ್ಳುವುದನ್ನು ಮತ್ತು ಕ್ಷಮೆಕೇಳುವುದನ್ನು ನಮ್ಮ ಮಕ್ಕಳು ಕೇಳಿಸಿಕೊಳ್ಳಬೇಕು. ನಾವು ಹಾಗೆ ಮಾಡದಿದ್ದರೆ, ಅವರು ತಮ್ಮ ತಪ್ಪುಗಳನ್ನು ಮುಚ್ಚಿಡುವುದು ಹೇಗೆಂದು ಮಾತ್ರ ಕಲಿಯುತ್ತಾರೆ.”—ರಾಬಿನ್‌.

“ಹೆತ್ತವರಾದ ನಾವು ನಮ್ಮ ಮಕ್ಕಳ ಮೇಲೆ ಅತೀ ಹೆಚ್ಚು ಪ್ರಭಾವ ಬೀರಸಾಧ್ಯವಿದೆ. ನಮಗಿರುವ ಅತಿ ಶ್ರೇಷ್ಠ ಸಾಧನ ನಮ್ಮ ಮಾದರಿ ಆಗಿದೆ ಯಾಕೆಂದರೆ ಅವರು ಎಲ್ಲ ಸಮಯದಲ್ಲೂ ಅದನ್ನು ನೋಡಬಲ್ಲರು. ಅದು ಯಾವಾಗಲೂ ತೆರೆದಿರುವ ಪುಸ್ತಕದಂತಿದೆ, ಯಾವಾಗಲೂ ಕಲಿಸುತ್ತಾ ಇರುವ ಪಾಠದಂತಿದೆ.”—ವೆಂಡೆಲ್‌.