ಅಂಗೈಯಲ್ಲಿ ಗ್ರಂಥಾಲಯ
ಅಕ್ಟೋಬರ್ 7, 2013ರಲ್ಲಿ ಬೈಬಲನ್ನು ಓದಲು ಮತ್ತು ಅಧ್ಯಯನ ಮಾಡಲು ಯೆಹೋವನ ಸಾಕ್ಷಿಗಳು ಒಂದು ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದರು. ಅದರ ಹೆಸರು JW ಲೈಬ್ರರಿ. ಈ ಉಚಿತ ಆ್ಯಪ್ನಲ್ಲಿ ಇಂಗ್ಲಿಷ್ ಭಾಷೆಯ ಆರು ಬೈಬಲ್ ಭಾಷಾಂತರಗಳಿವೆ. ಇದರಲ್ಲಿ ಕಿಂಗ್ ಜೇಮ್ಸ್ ವರ್ಷನ್ ಮತ್ತು 2013ರಲ್ಲಿ ಪರಿಷ್ಕೃತಗೊಂಡ ಪವಿತ್ರ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರ ಸಹ ಒಳಗೂಡಿವೆ. *
ಇದನ್ನು ಏಕೆ ಮಾಡಲಾಯಿತು?
ಲಕ್ಷಾಂತರ ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ, ಆಗು ಹೋಗುಗಳಿಗಾಗಿ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಮತ್ತು ಇದೇ ರೀತಿಯ ಇನ್ನಿತರ ಸಾಧನಗಳ ಮೊರೆ ಹೋಗಿದ್ದಾರೆ. ಮೊಬೈಲಿನಲ್ಲೇ jw.org ವೆಬ್ಸೈಟ್ ಬಳಸಿ ಬೈಬಲನ್ನು ಓದಲು ಮತ್ತು ಅಧ್ಯಯನ ಮಾಡಲು ಸಾಧ್ಯವಿರುವಾಗ JW ಲೈಬ್ರರಿ ಆ್ಯಪ್ನ ಅವಶ್ಯಕತೆ ಏನಿತ್ತು?
ಮುಖ್ಯವಾಗಿ ಎರಡು ಕಾರಣಗಳಿಗಾಗಿ ಇದರ ಅವಶ್ಯಕತೆಯಿತ್ತು. ಮೊದಲನೆಯದಾಗಿ, ಒಮ್ಮೆ ಇನ್ಸ್ಟಾಲ್ ಮಾಡಿಕೊಂಡ ನಂತರ ಇದನ್ನು ಆಫ್ಲೈನ್ನಲ್ಲಿ ಉಪಯೋಗಿಸಬಹುದು. ಹಾಗಾಗಿ ಇಂಟರ್ನೆಟ್ನ ಅವಶ್ಯಕತೆಯಿರುವುದಿಲ್ಲ. ಎರಡನೆಯದಾಗಿ, ಬೈಬಲ್ ವಚನಗಳನ್ನು ಸುಲಭವಾಗಿ ತೆಗೆಯಲು ಮತ್ತು ಬೈಬಲನ್ನು ಆಳವಾಗಿ ಅಧ್ಯಯನ ಮಾಡಲು ಸಹಾಯವಾಗುತ್ತದೆ. ಅದು ಹೇಗೆ?
ಬೈಬಲನ್ನು ಅಧ್ಯಯನ ಮಾಡಲು JW ಲೈಬ್ರರಿ ನೆರವಾಗುತ್ತದೆ
ಮೊದಲ ಬಾರಿಗೆ JW ಲೈಬ್ರರಿಯನ್ನು ತೆರೆದಾಗ ಅದರಲ್ಲಿ ಬೈಬಲ್ ಪುಸ್ತಕಗಳ ಹೆಸರುಗಳನ್ನು ನೀವು ಕಾಣಬಹುದು. ಅಲ್ಲಿ ನಿಮಗೆ ಬೇಕಾದ ಪುಸ್ತಕದ ಮೇಲೆ ಕ್ಲಿಕ್ಕಿಸಿದರೆ ಅದರ ಅಧ್ಯಾಯ ಸಂಖ್ಯೆಗಳು ಸಿಗುತ್ತವೆ. ಹೀಗೆ ಕೆಲವೇ ಕ್ಷಣಗಳಲ್ಲಿ ನಿಮಗೆ ಬೇಕಾದ ವಚನ ಅಥವಾ ಅಧ್ಯಾಯದ ಭಾಗವನ್ನು ನೋಡಬಹುದು. ಈ ಆಪ್ನಲ್ಲಿ ಇನ್ನೂ ಹತ್ತು ಹಲವಾರು ವಿಶೇಷತೆಗಳಿವೆ:
ವಚನಗಳ ಅರ್ಥ ಅಥವಾ ಹಿನ್ನಲೆ ಮತ್ತು ಕೆಲವು ಪದಗಳ ಬದಲಿ ಅರ್ಥಗಳು ಪಾದಟಿಪ್ಪಣಿಗಳಲ್ಲಿವೆ
ಬೈಬಲ್ ವಚನಗಳಿಗೆ ಸಂಬಂದಪಟ್ಟ ಅಡ್ಡ ಉಲ್ಲೇಖಗಳಿವೆ
ತಮಗೆ ಬೇಕಾದ ಪದ ಅಥವಾ ವಾಕ್ಯ ಬೈಬಲಿನಲ್ಲಿ ಎಲ್ಲೆಲ್ಲಿ ಕಂಡುಬರುತ್ತವೆ ಎಂಬುದನ್ನು ಸಹ ಹುಡುಕಬಹುದು
ಬೈಬಲಿನಲ್ಲಿನ ಪ್ರತಿ ಪುಸ್ತಕದ ಆರಂಭದಲ್ಲಿ ಹೊರಮೇರೆ ಇದೆ
ಪ್ರತಿ ಬೈಬಲ್ ಪುಸ್ತಕದ ಬರಹಗಾರನ ಹೆಸರು, ಬರೆದ ಸ್ಥಳ, ಯಾವ ವರ್ಷದಲ್ಲಿ ಬರೆಯಲಾಯಿತು ಮತ್ತು ಆ ಪುಸ್ತಕದಲ್ಲಿರುವ ಘಟನೆಗಳ ಸಮಯಾವಧಿ ಇವೆಲ್ಲವುಗಳ ಮಾಹಿತಿಯಿರುವ ಪಟ್ಟಿಯಿದೆ
ಬಣ್ಣದಿಂದ ಕೂಡಿದ ನಕ್ಷೆ, ಚಾರ್ಟ್, ಸಮಯಾವಧಿ ಮತ್ತು ಚಿತ್ರ ಇವೆಲ್ಲವುಗಳಿಗಾಗಿ ಕೆಲವೊಂದು ಪುಟಗಳನ್ನು ಬದಿಗಿರಿಸಲಾಗಿದೆ
ಯೆಹೋವನ ಸಾಕ್ಷಿಗಳಿಂದ ತಯಾರಾಗುವ ಎಲ್ಲಾ ಪ್ರಕಾಶನಗಳಂತೆ ಈ JW ಲೈಬ್ರರಿ ಸಹ ಉಚಿತ. ಈ ಬೈಬಲ್ ಆ್ಯಪ್ನ ಹಿಂದೆ ಸ್ವಯಂ ಪ್ರೇರಿತ ದೇಣಿಗೆಗಳ ಸಹಾಯ ಹಸ್ತವಿದೆ. ಈಗಾಗಲೇ ಲಕ್ಷಾಂತರ ಜನರು ಇದನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ. (2 ಕೊರಿಂಥ 9:7) ನೀವ್ಯಾಕೆ ಇದನ್ನು ಡೌನ್ಲೋಡ್ ಮಾಡಿಕೊಂಡು ಇದರ ಪ್ರಯೋಜನ ಪಡೆಯಬಾರದು?
^ ಪ್ಯಾರ. 2 ಜನವರಿ 2014ರಲ್ಲಿ ಈ ಆ್ಯಪ್ಗೆ, ಯೆಹೋವನ ಸಾಕ್ಷಿಗಳು ಪ್ರತಿದಿನ ಪರಿಗಣಿಸುವ ಶಾಸ್ತ್ರವಚನದ ವಿವರಣೆ ಮತ್ತು ಸಂಗೀತ ಪುಸ್ತಕವನ್ನು ಕೂಡಿಸಲಾಯಿತು.