ಆತ್ಮಹತ್ಯೆ ಮಾಡಿಕೊಳ್ಳದಂತೆ ಕಾಪಾಡಿದರು
ಇಬ್ಬರು ಯೆಹೋವನ ಸಾಕ್ಷಿಗಳು ಮನೆ-ಮನೆ ಸೇವೆ ಮಾಡುವಾಗ ಒಂದು ಮನೆಯ ಕರೆಗಂಟೆ ಒತ್ತಿದರು. ಆಗ ದುಃಖದಲ್ಲಿ ಮುಳುಗಿ ಹೋದಂತೆ ಕಾಣುವ ಒಬ್ಬ ವ್ಯಕ್ತಿ ಬಾಗಿಲನ್ನು ತೆರೆದನು. ಅವನ ಹಿಂದೆ ನೇತಾಡುತ್ತಿರುವ ಒಂದು ಹಗ್ಗ ಕಾಣಿಸುತ್ತಿತ್ತು.
ಮನೆಯವನು ಆ ಸಾಕ್ಷಿಗಳನ್ನು ಒಳಗೆ ಕರೆದಾಗ ಅವರು ಆ ಹಗ್ಗ ಯಾಕೆ ಅಲ್ಲಿದೆ ಎಂದು ಕೇಳಿದರು. ಅದಕ್ಕವನು ‘ನಾನು ಇನ್ನೇನು ಆತ್ಮಹತ್ಯೆ ಮಾಡಿಕೊಳ್ಳಲಿದ್ದೆ, ಆಗಲೇ ಕರೆಗಂಟೆ ಕೇಳಿಸಿತು. ಇದೊಂದು ಬಾರಿ ಹೋಗಿ ನೋಡುವ ಎಂದು ಬಾಗಿಲನ್ನು ತೆರೆದೆ’ ಅಂದನು. ಆಗ ಸಾಕ್ಷಿಗಳು ಅವನೊಂದಿಗೆ ಮಾತಾಡಿ ಅವನನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋದರು. ವೈದ್ಯರು ಆ ವ್ಯಕ್ತಿಗೆ ಸಹಾಯ ಮಾಡಿದರು.
ಈ ಘಟನೆ ಬೆಲ್ಜಿಯನ್ ವಾರ್ತಾ ಪತ್ರಿಕೆಯಲ್ಲಿ ಬಂದಿತ್ತು. ಯೆಹೋವನ ಸಾಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದವರನ್ನು ಕಾಪಾಡಿದ್ದು ಇದೇ ಮೊದಲ ಬಾರಿ ಅಲ್ಲ. ಪ್ರಪಂಚದ ಅನೇಕ ಕಡೆಗಳಲ್ಲಿ ನಡೆದ ಇಂತಹದ್ದೇ ಕೆಲವು ಘಟನೆಗಳನ್ನು ಪರಿಗಣಿಸಿ.
ಗ್ರೀಸ್ ದೇಶದ ಒಬ್ಬ ಸ್ತ್ರೀ ಹೀಗೆ ಬರೆದಳು: ನನ್ನ ಸ್ನೇಹಿತನಿಂದಾಗಿ ನಾನು ತುಂಬ ನಿರಾಶಳಾಗಿದ್ದೆ. ಕ್ರಮೇಣ ಖಿನ್ನತೆಗೂ ಒಳಗಾದೆ. ಆಗ, ಈ ನೋವನ್ನು ಸಹಿಸಿಕೊಳ್ಳಲಿಕ್ಕಾಗದೆ ಸಾಯಬೇಕು ಅಂತ ನಿರ್ಧರಿಸಿದೆ. ಸಾಯುವ ಯೋಚನೆಯೇ ನನಗೆಷ್ಟೋ ನೆಮ್ಮದಿ ಕೊಡುತ್ತಿತ್ತು. ನನ್ನ ನೋವಿಗೆ ಪೂರ್ಣವಿರಾಮ ಇಡಬೇಕೆಂದು ಬಯಸಿದೆ.
ಆದರೆ ಆ ಸ್ತ್ರೀ ಹಾಗೆ ಮಾಡದೆ ವೈದ್ಯರ ಬಳಿಗೆ ಹೋದಳು. ಸ್ವಲ್ಪ ಸಮಯದ ನಂತರ, ಅವಳಿಗೆ ಯೆಹೋವನ ಸಾಕ್ಷಿಗಳ ಭೇಟಿಯಾಯಿತು. ಬೈಬಲ್ ಅಧ್ಯಯನವನ್ನು ತೆಗೆದುಕೊಂಡು, ಕೂಟಗಳಿಗೆ ಹಾಜರಾಗಲು ಆರಂಭಿಸಿದಳು. “ನಾನು ಇಷ್ಟು ವರ್ಷಗಳಿಂದ ಬಯಸುತ್ತಿದ್ದ ನಿಸ್ವಾರ್ಥ ಪ್ರೀತಿ ನನಗೆ ಇವರಿಂದ ಸಿಕ್ಕಿತು. ನಂಬಿಗಸ್ತ ನಿಜ ಸ್ನೇಹಿತ-ಸ್ನೇಹಿತೆಯರು ನನಗೆ ಸಿಕ್ಕಿದ್ದಾರೆ. ನನಗೀಗ ನೆಮ್ಮದಿ ಇದೆ, ಸಂತೋಷದಿಂದಿದ್ದೇನೆ ಮತ್ತು ಮುಂದೇನಾಗುತ್ತೋ ಎಂಬ ಚಿಂತೆ ಇಲ್ಲ” ಎಂದವಳು ಬರೆದಳು.
ಇಂಗ್ಲೆಂಡ್‌ನ ಸಾಕ್ಷಿಯೊಬ್ಬಳು ಹೀಗೆ ಬರೆದಳು: “ನನ್ನ ಪರಿಚಯದವಳೊಬ್ಬಳು ಒಮ್ಮೆ ನನಗೆ ಫೋನ್ ಮಾಡಿದಳು. ತುಂಬ ನೊಂದುಕೊಂಡಿದ್ದ ಅವಳು ಆ ರಾತ್ರಿಯೇ ತಾನು ಸಾಯುತ್ತೇನೆ ಅಂತ ಹೇಳಿದಳು. ಆಗ ನಾನು ಮೇ 2008ರ ಎಚ್ಚರ! ಪತ್ರಿಕೆಯಿಂದ ಆತ್ಮಹತ್ಯೆಯನ್ನು ನಿರುತ್ತೇಜಿಸುವ ಕೆಲವು ವಿಷಯಗಳನ್ನು ಅವಳಿಗೆ ತಿಳಿಸುತ್ತಾ ಅವಳ ನಿರ್ಣಯ ಸರಿಯಲ್ಲ ಎಂದು ಮನಗಾಣಿಸಿದೆ. ಸಾಂತ್ವನ ನೀಡುವ ಕೆಲವು ಬೈಬಲ್ ವಚನಗಳನ್ನೂ ಆಕೆಗೆ ತಿಳಿಸಿದೆ. ಪರಿಣಾಮ, ಸಮಸ್ಯೆಗಳಿದ್ದರೂ ಸಾಯಬೇಕೆಂಬ ಯೋಚನೆ ಅವಳಿಗಿಲ್ಲ.”
ಘಾನದ ಯೆಹೋವನ ಸಾಕ್ಷಿ ಮೈಕಲ್‌ಗೆ ತನ್ನ ಕೆಲಸದ ಸ್ಥಳದಲ್ಲಿ ಒಬ್ಬ ಸ್ತ್ರೀಯ ಒಳ್ಳೇ ಪರಿಚಯವಿತ್ತು. ಒಂದು ದಿನ ಆಕೆ ತುಂಬ ಖಿನ್ನಳಾಗಿದ್ದನ್ನು ಮೈಕಲ್ ಗಮನಿಸಿ, ಕಾರಣವೇನೆಂದು ಕೇಳಿದ.
ತನ್ನ ಗಂಡ ತನ್ನನ್ನು ಬಿಟ್ಟು ಬೇರೆಯವಳೊಂದಿಗೆ ಇದ್ದಾನೆ, ಆದ್ದರಿಂದ ತಾನು ಸಾಯಬೇಕೆಂದಿದ್ದೇನೆ ಎಂದು ಆಕೆ ಹೇಳಿದಳು. ಮೈಕಲ್ ಆಕೆಗೆ ಸಾಂತ್ವನ ಹೇಳಿ ಬೈಬಲಿನ ಬಗ್ಗೆ ತಿಳಿಸುವ ಎರಡು ಪುಸ್ತಕಗಳನ್ನು ಕೊಟ್ಟ. ಅದರಲ್ಲಿರುವ ವಿಷಯವನ್ನು ಓದಿದಾಗ ಆಕೆಗೆ ಸಾಯಬೇಕೆಂದು ಅನಿಸಲಿಲ್ಲ. ನಂತರ ಆಕೆ ಬೈಬಲ್ ಅಧ್ಯಯನ ಆರಂಭಿಸಿದಳು ಮತ್ತು ಈಗ ಒಬ್ಬ ಯೆಹೋವನ ಸಾಕ್ಷಿಯಾಗಿದ್ದಾಳೆ.
ಅಮೆರಿಕದ ಒಂದು ವಾರ್ತಾ ಪತ್ರಿಕೆ, ಒಬ್ಬ ಯುವ ಯೆಹೋವನ ಸಾಕ್ಷಿ ಸುವಾರ್ತೆ ಸಾರಲೆಂದು ಹೋದಾಗ, ಪಾರ್ಕಿಂಗ್‌ನಲ್ಲಿ ಎಂಜಿನ್ ಆನ್ ಆಗಿ ಇದ್ದ ಕಾರನ್ನು ಗಮನಿಸಿದ್ದರ ಬಗ್ಗೆ ವರದಿಸಿತು.
ಆ ಯುವ ಸಾಕ್ಷಿ ನಡೆದದ್ದನ್ನು ಹೀಗೆ ಹೇಳುತ್ತಾನೆ: “ಕಾರಿನ ಹೊಗೆ ಹೋಗುವ ಪೈಪ್‌ನಲ್ಲಿ ಒಂದು ಡ್ರೈಯರ್ ಪೈಪ್ ಇರುವುದನ್ನು ಗಮನಿಸಿದೆ. ಅದರ ಇನ್ನೊಂದು ತುದಿ ಕಿಟಕಿಯ ಮೂಲಕ ಕಾರಿನ ಒಳಗೆ ಹೋಗಿತ್ತು ಮತ್ತು ಆ ಕಿಟಕಿಯಿಂದ ಗಾಳಿ ಹೋಗದ ಹಾಗೆ ಸುತ್ತಲೂ ಟೇಪ್ ಸುತ್ತಿದ್ದರು.”
“ನಾನು ಕಾರಿನ ಹತ್ತಿರಕ್ಕೆ ಧಾವಿಸುತ್ತಿದ್ದಂತೆ ಒಬ್ಬ ಸ್ತ್ರೀ ಆ ಕಾರಿನಲ್ಲಿ ಕುಳಿತು ಅಳುತ್ತಿರುವುದು ಕಿಟಕಿ ಮೂಲಕ ಕಾಣಿಸಿತು. ಕಾರು ತುಂಬ ಹೊಗೆ ಇತ್ತು. ಆಗ ನಾನು ‘ನೀವೇನು ಮಾಡುತ್ತಿದ್ದೀರಾ?’ ಅಂತ ಜೋರಾಗಿ ಕಿರುಚಿದೆ.”
“ಬಾಗಿಲನ್ನು ತೆರೆಯಲು ಹೋದಾಗ ಹಿಂದಿನ ಸೀಟಿನಲ್ಲಿ ಮೂವರು ಚಿಕ್ಕ ಮಕ್ಕಳು ಇರುವುದನ್ನು ನೋಡಿದೆ. ನಾನು ಕೂಡಲೇ ಬಾಗಿಲನ್ನು ತೆರೆದೆ. ಆಗ ಆಕೆ, ‘ನಾನು ಹೋಗಬೇಕು! ನಾನು ಹೋಗಬೇಕು! ನನ್ನ ಜೊತೆಯಲ್ಲಿ ನನ್ನ ಮಕ್ಕಳನ್ನೂ ಕರೆದುಕೊಂಡು ಹೋಗಬೇಕು!’ ಅಂತ ಹೇಳಿದಳು.”
“ನಾನು, ‘ದಯವಿಟ್ಟು ಹಾಗೆ ಮಾಡಬೇಡಿ, ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲ್ಲ’ ಅಂತ ಹೇಳಿದೆ.”
“ಅದಕ್ಕವಳು, ‘ನಾನು ಸ್ವರ್ಗಕ್ಕೆ ಹೋಗಬೇಕು, ನನ್ನ ಜೊತೆಯಲ್ಲಿ ನನ್ನ ಮಕ್ಕಳನ್ನೂ ಕರೆದುಕೊಂಡು ಹೋಗಬೇಕು’ ಅಂದಳು.”
“ಅವಳು ಅಳುತ್ತಿರುವುದನ್ನು ನೋಡುವಾಗ ನನಗೂ ಅಳು ಬಂತು. ನಾನಲ್ಲೇ ಮೊಣಕಾಲೂರಿ ಕೂತು, ‘ದಯವಿಟ್ಟು ಈ ರೀತಿ ಮಾಡಬೇಡಿ’ ಅಂತ ಬೇಡಿಕೊಂಡೆ. ನಂತರ ನಾನು ಅವಳನ್ನು ಕಾರಿನಿಂದ ನಿಧಾನವಾಗಿ ಹೊರಗೆ ಎಳೆದು ತಂದೆ.”
“ಕೂಡಲೇ ಅವಳು, ‘ನನ್ನ ಮಕ್ಕಳನ್ನು ಕಾಪಾಡಿ’ ಅಂತ ಕಿರುಚಿದಳು.”
“ಅವರು ನನ್ನ ಕಡೆಗೆ ಕೈ ಚಾಚಿದರು. ಅವರಲ್ಲಿಬ್ಬರು ಐದು ಮತ್ತು ನಾಲ್ಕು ವರ್ಷದ ಹೆಣ್ಣು ಮಕ್ಕಳು, ಇನ್ನೊಂದು 2 ವರ್ಷದ ಗಂಡು ಮಗು. ತಾವು ಇನ್ನೇನು ಸ್ವಲ್ಪ ಸಮಯದಲ್ಲೇ ಸಾಯಲಿದ್ದೇವೆ ಅನ್ನುವುದರ ಬಗ್ಗೆ ಏನೂ ಗೊತ್ತಿಲ್ಲದೆ ಸುಮ್ಮನೆ ಹಿಂದಿನ ಸೀಟಿನಲ್ಲಿ ಕುಳಿತಿದ್ದರು.”
“ಹೀಗೆ ನಾಲ್ವರನ್ನೂ ಹೊರ ತೆಗೆದ ನಂತರ ಕಾರಿನ ಎಂಜಿನನ್ನು ಆಫ್ ಮಾಡಿದೆ. ನಾವು ಅಲ್ಲೇ ಇದ್ದ ಕಲ್ಲಿನ ಕಟ್ಟೆ ಮೇಲೆ ಕುಳಿತೆವು. ನಂತರ ‘ನಿಮಗೇನು ಸಮಸ್ಯೆ? ನನಗೆ ಹೇಳಿ’ ಅಂತ ಹೇಳಿದೆ.”
ಯೆಹೋವನ ಸಾಕ್ಷಿಗಳು ಜೀವವನ್ನು ಸೃಷ್ಟಿಕರ್ತನಿಂದ ಬಂದ ಅಮೂಲ್ಯ ಉಡುಗೊರೆ ಎಂದು ವೀಕ್ಷಿಸುತ್ತಾರೆ. ಇವರು, ಇಡೀ ಭೂಮಿಯಲ್ಲಿ ಯಾರೆಲ್ಲಾ ಆತ್ಮಹತ್ಯೆಯಿಂದಾಗಿ ಪ್ರಿಯರನ್ನು ಕಳೆದುಕೊಂಡಿದ್ದಾರೋ ಮತ್ತು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೋ ಅವರನ್ನು ಭೇಟಿ ಮಾಡಿ ಸಾಂತ್ವನ ನೀಡಲು ತಮ್ಮಿಂದಾದಷ್ಟು ಶ್ರಮಿಸುತ್ತಾರೆ.