ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

“ಮಾರ್ಷಲ್‌ ಆರ್ಟ್ಸ್‌ ನನ್ನ ಜೀವ ಆಗಿತ್ತು”

“ಮಾರ್ಷಲ್‌ ಆರ್ಟ್ಸ್‌ ನನ್ನ ಜೀವ ಆಗಿತ್ತು”
  • ಜನನ: 1962

  • ದೇಶ: ಅಮೆರಿಕ

  • ಹಿಂದೆ: ಮಾರ್ಷಲ್‌ ಆರ್ಟ್ಸ್‌ ಅಂದ್ರೆ ಪ್ರಾಣ

ಹಿನ್ನೆಲೆ

 ನಾನು ಎದುರಿಗೆ ಇದ್ದವನನ್ನ ಜೊರಾಗಿ ಒದ್ದೆ. ಅದು ಅಪ್ಪಿತಪ್ಪಿ ಅವನ ಮೂಗಿಗೆ ತಾಗಿ ತುಂಬ ಗಾಯ ಆಯ್ತು. ಹೀಗಾಗುತ್ತೆ ಅಂತ ಅಂದ್ಕೊಂಡಿರಲಿಲ್ಲ. ನನಗೆ ತುಂಬ ಬೇಜಾರಾಗಿಬಿಡ್ತು. ಮಾರ್ಷಲ್‌ ಆರ್ಟ್ಸ್‌ ಅಂದ್ರೆ ನನಗೆ ಪಂಚಪ್ರಾಣ. ಎಷ್ಟೋ ವರ್ಷ ಪ್ರಾಕ್ಟಿಸ್‌ ಮಾಡ್ದೆ. ಆದ್ರೆ ಅವನಿಗಾದ ಗಾಯ ನೋಡಿ ಇನ್ನು ಮುಂದೆ ಆ ಮಾರ್ಷಲ್‌ ಆರ್ಟ್ಸ್‌ಗೆ ಹೋಗಬೇಕಾ ಬೇಡ್ವಾ ಅನ್ನೋ ದೊಡ್ಡ ಪ್ರಶ್ನೆ ನನ್ನ ಮನಸ್ಸಿಗೆ ಬಂತು. ಇದೆಲ್ಲ ಹೇಗಾಯ್ತು ಅಂತ ಹೇಳೋಕ್ಕೆ ಮುಂಚೆ ನಾನು ನಿಮಗೆ ನನ್ನ ಕಥೆ ಹೇಳ್ತಿನಿ.

 ಅಮೆರಿಕದ ನ್ಯೂ ಯಾರ್ಕ್‌ನ ಬಫೆಲ್ಲೋ ನಗರದಲ್ಲಿ ನಾನು ಹುಟ್ಟಿಬೆಳೆದೆ. ನಮ್ಮದೊಂದು ಹ್ಯಾಪಿ ಫ್ಯಾಮಿಲಿ. ದೇವರ ಮೇಲೆ ತುಂಬ ಭಕ್ತಿ. ನಾನು ಮೊದಲು ಕ್ಯಾಥೊಲಿಕ್‌. ಓದಿದ್ದೂ ಕ್ಯಾಥೊಲಿಕ್‌ ಸ್ಕೂಲಲ್ಲೇ. ಚರ್ಚಲ್ಲಿ ಆಲ್ಟರ್‌ ಬಾಯ್‌ ಕೂಡ ಆಗಿದ್ದೆ. ಅಪ್ಪಅಮ್ಮಗೆ ನಾನು, ಅಕ್ಕ ಜೀವನದಲ್ಲಿ ಏನಾದ್ರೂ ಸಾಧಿಸಬೇಕು ಅಂತ ಆಸೆ. ಸ್ಕೂಲ್‌ ಆದಮೇಲೆ ಸ್ಪೋರ್ಟ್ಸ್‌ಗೆ, ಪಾರ್ಟ್‌ಟೈಮ್‌ ಕೆಲಸಕ್ಕೆ ಬಿಡ್ತಿದ್ರು. ಆದ್ರೆ ನಾವು ಒಳ್ಳೇ ಮಾರ್ಕ್ಸ್‌ ತಗೊಬೇಕಿತ್ತು. ಹಾಗಾಗಿ ಚಿಕ್ಕ ವಯಸ್ಸಿಂದಾನೇ ನಾನು ತುಂಬ ಶಿಸ್ತಿಂದ ನಡ್ಕೊತ್ತಿದ್ದೆ.

 17 ವಯಸ್ಸಿಂದಾನೇ ನಾನು ಮಾರ್ಷಲ್‌ ಆರ್ಟ್ಸ್‌ ಕಲಿಯಕ್ಕೆ ಶುರುಮಾಡಿದೆ. ವಾರದಲ್ಲಿ 6 ದಿನ, ದಿನಕ್ಕೆ 3 ಗಂಟೆ ತಪ್ಪದೆ ಪ್ರಾಕ್ಟೀಸ್‌ ಮಾಡ್ತಿದ್ದೆ. ಹೀಗೆ ಎಷ್ಟೋ ವರ್ಷಗಳ ವರೆಗೆ ಮಾಡಿದೆ. ಮಾರ್ಷಲ್‌ ಆರ್ಟ್ಸ್‌ನಲ್ಲಿ ದೇಹದ ಅಂಗಗಳನ್ನು ಹೇಗೆ ಬಳಸಬೇಕು ಅನ್ನೋದ್ರ ಬಗ್ಗೆ ಕೆಲವು ಟೆಕ್‌ನಿಕ್‌ಗಳನ್ನ ಮನಸ್ಸಲ್ಲೇ ಯೋಚಿಸ್ತಿದ್ದೆ. ಪ್ರತಿ ದಿನ ಗಂಟೆಗಟ್ಟಲೇ ಇದ್ರಲ್ಲೇ ಕಳೀತಿದ್ದೆ. ಮಾರ್ಷಲ್‌ ಆರ್ಟ್ಸ್‌ನಲ್ಲಿ ಪಂಟನಾಗಲಿಕ್ಕೆ ಪ್ರತಿ ವಾರ ವಿಡಿಯೋಗಳನ್ನೂ ನೋಡ್ತಿದ್ದೆ. ಕಣ್ಣುಮುಚ್ಚಿಕೊಂಡು ಪ್ರಾಕ್ಟಿಸ್‌ ಮಾಡೋದಂದ್ರೆ ನನಗೆ ತುಂಬ ಇಷ್ಟ. ಆಯುಧಗಳನ್ನು ಹಿಡ್ಕೊಂಡು ಪ್ರಾಕ್ಟಿಸ್‌ ಮಾಡುವಾಗ್ಲೂ ಕಣ್ಣು ಕಟ್ಕೊಳ್ತಿದ್ದೆ. ಒಂದೇ ಏಟಿಗೆ ಬೋರ್ಡ್‌ಗಳನ್ನ, ಇಟ್ಟಿಗೆಗಳನ್ನ ಒಡೆದುಹಾಕ್ತಿದ್ದೆ. ಮಾರ್ಷಲ್‌ ಆರ್ಟ್ಸ್‌ನಲ್ಲಿ ನಾನು ಎತ್ತಿದ ಕೈ ಆಗಿದ್ರಿಂದ ಸ್ಪರ್ಧೆಗಳಲ್ಲಿ ತುಂಬ ಟ್ರಾಫಿಗಳನ್ನ ಗೆಲ್ತಿದ್ದೆ. ಈ ಮಾರ್ಷಲ್‌ ಆರ್ಟ್ಸ್‌ ಇಲ್ಲದಿದ್ರೆ ಬದುಕೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಹೋದೆ.

 ಜೀವನದಲ್ಲಿ ನಾನು ನೆನಸಿದ್ದನ್ನ ಸಾಧಿಸಿದೆ. ಹೆಚ್ಚು ಮಾರ್ಕ್ಸ್‌ ಪಡೆದು ಪದವಿ ಪಡದೆ. ದೊಡ್ಡ ಕಂಪನಿಯಲ್ಲಿ ಕಂಪ್ಯೂಟರ್‌ ಇಂಜಿನಿಯರ್‌ ಆಗಿ ಕೆಲಸ ಮಾಡಿದೆ. ಕಂಪನಿ ತುಂಬ ಸೌಕರ್ಯಗಳನ್ನ ಕೊಡ್ತು. ಸ್ವಂತ ಮನೆ ಮಾಡ್ದೆ. ಒಬ್ಬಳು ಗರ್ಲ್‌ ಫ್ರೆಂಡ್‌ ಕೂಡ ಇದ್ದಳು. ನೋಡಿದವರಿಗೆ ನನಗೆ ಜೀವನದಲ್ಲಿ ಏನೂ ಕಡಿಮೆ ಇಲ್ಲ ಅಂತ ಅನಿಸ್ತಿತ್ತು. ಆದ್ರೆ ನಾನು ಖುಷಿಯಾಗಿರಲಿಲ್ಲ. ಮನಸ್ಸಲ್ಲಿ ಎಷ್ಟೋ ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿದಿತ್ತು.

ಬದುಕನ್ನೇ ಬದಲಾಯಿಸಿತು ಬೈಬಲ್‌

 ನನ್ನ ಪ್ರಶ್ನೆಗಳಿಗೆ ಉತ್ತರ ಹುಡ್ಕೊಂಡು ವಾರದಲ್ಲಿ ಎರಡು ದಿನ ಚರ್ಚಿಗೆ ಹೋಗಲು ಶುರುಮಾಡ್ದೆ. ಸಹಾಯಕ್ಕಾಗಿ ದೇವರ ಹತ್ರ ಪ್ರಾರ್ಥನೆ ಮಾಡ್ದೆ. ಒಂದಿನ ನನ್ನ ಫ್ರೆಂಡ್‌ ಜೊತೆ ಮಾತಾಡ್ತಾ ಮಾತಾಡ್ತಾ “ನಾವು ಯಾಕೆ ಬದುಕಿದ್ದೀವಿ? ಎಲ್ಲಿ ನೋಡಿದ್ರೂ ಬರೀ ಸಮಸ್ಯೆ, ಅನ್ಯಾಯ ಇದ್ಯಲ್ಲಾ” ಅಂದೆ. ಅವನಿಗೂ ಅದೇ ಪ್ರಶ್ನೆ ಇತ್ತಂತ್ತೆ. ಈ ಸಂಭಾಷಣೆ ನನ್ನ ಜೀವನದ ತಿರುಗುಬಿಂದು ಆಗಿತ್ತು. ಅವನಿಗೆ ಆ ಪ್ರಶ್ನೆಗಳಿಗೆಲ್ಲ ತೃಪ್ತಿ ಆಗೋ ಉತ್ತರ ಬೈಬಲಿಂದ ಸಿಕ್ತು ಅಂದ. ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ a ಅನ್ನೋ ಪುಸ್ತಕನೂ ಕೊಟ್ಟ. ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಕಲಿತಿದ್ದೆ ಅಂದ. ಆ ಪುಸ್ತಕ ಓದಲಾ ಬೇಡವಾ ಅಂತ ಮೊದಲು ಅನಿಸ್ತು. ಯಾಕಂದ್ರೆ ಬೇರೆ ಧರ್ಮದ ಪುಸ್ತಕ ಓದಬಾರದು ಅಂತ ಅಂದ್ಕೊಂಡಿದ್ದೆ. ಆದ್ರೆ ನನ್ನ ಪ್ರಶ್ನೆಗಳಿಗೆ ಉತ್ತರ ತಿಳ್ಕೋಬೇಕು ಅನ್ನೋ ಆಸೆಯಿಂದ ಸಾಕ್ಷಿಗಳು ಏನು ಕಲಿಸ್ತಾರೆ ನೋಡೇ ಬಿಡೋಣ ಅಂದ್ಕೊಂಡು ಓದಿದೆ.

 ಬೈಬಲ್‌ ನಿಜವಾಗಲೂ ಏನು ಕಲಿಸುತ್ತೆ ಅಂತ ತಿಳ್ಕೊಂಡಾಗ ನನಗೆ ತುಂಬ ಆಶ್ಚರ್ಯ ಆಯ್ತು. ಮನುಷ್ಯರು ಭೂಮಿಯಲ್ಲಿ ಸದಾಕಾಲ ಬದುಕಬೇಕು ಅನ್ನೋದೇ ದೇವರ ಆಸೆ, ಈಗಲೂ ಆತನಿಗೆ ಅದೇ ಆಸೆ ಇದೆ ಅಂತ ತಿಳ್ಕೊಂಡೆ. (ಆದಿಕಾಂಡ 1:28) ನನ್ನ ಹತ್ರ ಇರೋ ಕಿಂಗ್‌ ಜೇಮ್ಸ್‌ ಬೈಬಲಲ್ಲಿ ದೇವರ ಹೆಸರು ಯೆಹೋವ ಅಂತ ಇರೋದು ನೋಡಿ ಮಾತೇ ಹೊರಡಲಿಲ್ಲ. ಕರ್ತನ ಪ್ರಾರ್ಥನೆಯಲ್ಲೂ ನಾನು ಹೇಳ್ತಾ ಇದ್ದದ್ದು ಇದೇ ಹೆಸರು ಅಂತ ನನಗೆ ಗೊತ್ತಾಯ್ತು. (ಕೀರ್ತನೆ 83:18; ಮತ್ತಾಯ 6:9) ಜನರು ಕಷ್ಟಪಡೋ ಹಾಗೇ ದೇವರು ಯಾಕೆ ಬಿಟ್ಟಿದ್ದಾನೆ ಅಂತಾನೂ ಕೊನೆಗೆ ಅರ್ಥ ಆಯ್ತು. ಒಂದೊಂದು ವಿಷ್ಯನೂ ಕಲಿತ ಹೋದ ಹಾಗೆ ನನ್ನ ಮೈ ಜುಮ್‌ ಅನಿಸ್ತು.

 ಯೆಹೋವನ ಸಾಕ್ಷಿಗಳ ಕೂಟಕ್ಕೆ ನಾನು ಮೊದಲನೇ ಸಲ ಹೋದಾಗ ಆದ ಅನುಭವವನ್ನ ಯಾವತ್ತೂ ಮರಿಯಲ್ಲ. ಎಲ್ಲ ಚೆನ್ನಾಗಿ ಮಾತಾಡಿಸಿದ್ರು. ಎಲ್ರೂ ನನ್ನ ಹೆಸರೇನು ಅಂತ ಕೇಳ್ತಿದ್ರು. ಅವತ್ತಿನ ಸಾರ್ವಜನಿಕ ಭಾಷಣದ ಮುಖ್ಯ ವಿಷ್ಯ, ಯಾರ ಪ್ರಾರ್ಥನೆಗಳಿಗೆ ದೇವರು ಉತ್ತರ ಕೊಡ್ತಾನೆ ಅಂತಿತ್ತು. ಸಹಾಯಕ್ಕಾಗಿ ನಾನು ದೇವರ ಹತ್ರ ಬೇಡ್ತಿದ್ದೆ. ಹಾಗಾಗಿ ಆ ಮುಖ್ಯ ವಿಷ್ಯ ಕೇಳಿದ ಕೂಡಲೇ ಮೈಯೆಲ್ಲ ಕಿವಿಯಾಗಿಸಿ ಕೇಳಿಸ್ಕೊಂಡೆ. ಆಮೇಲೆ ಕ್ರಿಸ್ತನ ಮರಣದ ಸ್ಮರಣೆಗೆ ಹೋದೆ. ಕೂಟಗಳಲ್ಲಿ ಭಾಷಣಕಾರ ಬೈಬಲ್‌ ವಚನ ಓದುವಾಗ ಮಕ್ಕಳು ಕೂಡ ಬೈಬಲ್‌ ತೆರೆದು ನೋಡ್ತಿದ್ರು. ಇದನ್ನು ನೋಡಿ ನಾನು ಮೂಗು ಮೇಲೆ ಬೆರಳು ಇಟ್ಕೊಂಡೆ. ನನಗೆ ಬೈಬಲ್‌ ವಚನ ತೆರೆದು ನೋಡೋದು ಗೊತ್ತಿರಲಿಲ್ಲ. ಆದ್ರೆ ಸಾಕ್ಷಿಗಳು ಹೇಗೆ ತೆರಿಯೋದು ಅಂತ ತೋರಿಸಿಕೊಟ್ಟು ತುಂಬ ಸಹಾಯ ಮಾಡಿದ್ರು.

 ಕೂಟಗಳಿಗೆ ಹೋಗ್ತಾ ಇದ್ದ ಹಾಗೆ ಸಾಕ್ಷಿಗಳು ಕಲಿಸ್ತಿರೋ ವಿಷ್ಯ ಕೇಳಿ ಗೌರವ ಜಾಸ್ತಿ ಆಯ್ತು. ಯಾಕಂದ್ರೆ ಅವರ ಬೋಧನೆಯ ಗುಣಮಟ್ಟ ಚೆನ್ನಾಗಿತ್ತು. ಪ್ರತಿ ಕೂಟದಲ್ಲೂ ತುಂಬ ವಿಷ್ಯ ಕಲಿತೆ. ಯಾವಾಗಲೂ ತುಂಬ ಪ್ರೋತ್ಸಾಹ ಸಿಕ್ತಿತ್ತು. ಆಮೇಲೆ ಸಾಕ್ಷಿಗಳು ಬೈಬಲ್‌ ಕಲಿಯಕ್ಕೆ ಇಷ್ಟ ಇದ್ಯಾ ಅಂತ ನನ್ನನ್ನ ಕೇಳಿದ್ರು. ನಾನು ಒಪ್ಕೊಂಡೆ.

 ಚರ್ಚಲ್ಲಿ ನಾನು ನೋಡಿದ ವಿಷ್ಯಕ್ಕೂ ಯೆಹೋವನ ಸಾಕ್ಷಿಗಳ ಮಧ್ಯೆ ನೋಡಿದ ವಿಷ್ಯಕ್ಕೂ ಅಜಗಜಾಂತರ ವ್ಯತ್ಯಾಸ ಇತ್ತು. ಸಾಕ್ಷಿಗಳಲ್ಲಿ ಒಗಟ್ಟಿದೆ, ದೇವರಿಗೆ ಇಷ್ಟ ಆಗೋ ತರ ಜೀವಿಸಲಿಕ್ಕೆ ತಮ್ಮಿಂದ ಆದಷ್ಟು ಪ್ರಯತ್ನಿಸ್ತಾರೆ, ತುಂಬ ಪ್ರಾಮಾಣಿಕರು ಅಂತ ಕಣ್ಣಾರೆ ನೋಡ್ದೆ. ನಿಜ ಕ್ರೈಸ್ತರ ಗುರುತಾಗಿರೋ ಪ್ರೀತಿಯನ್ನು ಅವರು ತೋರಿಸ್ತಿದ್ದಾರೆ ಅಂತ ಚೆನ್ನಾಗಿ ಅರ್ಥ ಆಯ್ತು.—ಯೋಹಾನ 13:35.

 ಬೈಬಲನ್ನ ಕಲಿತಾ ಹೋದ ಹಾಗೆ ನಾನು ತುಂಬ ಬದಲಾವಣೆಗಳನ್ನ ಮಾಡಿದೆ. ಬೈಬಲ್‌ ಮಟ್ಟಗಳಿಗೆ ಅನುಸಾರ ನಾನು ಜೀವಿಸಬೇಕಂತ ಅನಿಸ್ತು. ಆದ್ರೆ ಮಾರ್ಷಲ್‌ ಆರ್ಟ್ಸ್‌ ಇಲ್ಲದೆ ಬದುಕಕ್ಕಾಗಲ್ಲ ಅಂತ ನೆನಸಿದೆ. ಆ ಟ್ರೇನಿಂಗ್‌, ಪೈಪೋಟಿ ನನಗೆ ತುಂಬ ಇಷ್ಟ ಆಗಿತ್ತು. ಇದ್ರ ಬಗ್ಗೆ ನನಗೆ ಬೈಬಲ್‌ ಕಲಿಸ್ತಿದ್ದವರಿಗೆ ಹೇಳಿದಾಗ ಅವರು “ಕಲಿತಾ ಹೋಗು, ನೀನು ಸರಿಯಾದ ನಿರ್ಣಯ ಮಾಡೇ ಮಾಡ್ತಿಯ ಅಂತ ನನಗೆ ಗೊತ್ತು” ಅಂತ ಪ್ರೀತಿಯಿಂದ ಹೇಳಿದ್ರು. ನನಗೂ ಅದೇ ಬೇಕಿತ್ತು. ಯೆಹೋವನ ಬಗ್ಗೆ ಕಲಿತಾ ಹೋದ ಹಾಗೆ ಆತನಿಗೆ ಇಷ್ಟ ಆಗೋದನ್ನೇ ಮಾಡಬೇಕು ಅನ್ನೋ ಆಸೆನೂ ಜಾಸ್ತಿ ಆಯ್ತು.

 ಆದ್ರೆ ಮಾರ್ಷಲ್‌ ಆರ್ಟ್ಸ್‌ನ ವಿಷ್ಯದಲ್ಲಿ ಒಂದು ನಿರ್ಣಯ ಮಾಡಲೇಬೇಕಾದ ಪರಿಸ್ಥಿತಿ ಬಂತು. ಅದೇ ಆರಂಭದಲ್ಲಿ ನಾನು ತಿಳಿಸಿದ ಆ ಘಟನೆ. ಒಂದು ದಿನ ನಾನು ಎದುರಿಗೆ ಇದ್ದವನನ್ನ ಜೊರಾಗಿ ಒದ್ದೆ. ಅದು ಅಪ್ಪಿತಪ್ಪಿ ಅವನ ಮೂಗಿಗೆ ತಾಗಿತು. ಇದಾದ ಮೇಲೆ ಆ ಮಾರ್ಷಲ್‌ ಆರ್ಟ್ಸ್‌ನ ಮುಂದುವರಿಸಿದ್ರೆ ಕ್ರಿಸ್ತನು ಹೇಳಿದ ಹಾಗೆ ಶಾಂತಿಯಿಂದ ಇರಲಿಕ್ಕೆ ಆಗುತ್ತಾ ಅಂತ ತುಂಬ ಯೋಚನೆ ಮಾಡ್ದೆ. ಯೆಶಾಯ 2:3, 4 ರಲ್ಲಿ ಯೆಹೋವ ಹೇಳಿದ ಹಾಗೆ ನಡೆಯುವವರು ಯುದ್ಧವನ್ನು ಅಭ್ಯಾಸ ಮಾಡೋದಿಲ್ಲ ಅಂತ ನಾನು ಈಗಾಗಲೇ ಕಲಿತಿದ್ದೆ. ತಮಗೆ ಅನ್ಯಾಯ ಆದಾಗಲೂ ಇನ್ನೊಬ್ಬರಿಗೆ ಹಿಂಸೆ ಕೊಡಬಾರದು ಅಂತ ಯೇಸು ಕಲಿಸಿದನು. (ಮತ್ತಾಯ 26:52) ಕೊನೆಗೂ ನನಗೆ ಜೀವವಾಗಿದ್ದ ಮಾರ್ಷಲ್‌ ಆರ್ಟ್ಸ್‌ನ ಬಿಟ್ಟುಬಿಟ್ಟೆ.

 ಆಮೇಲೆ, “ದೇವಭಕ್ತಿಯನ್ನು ನಿನ್ನ ಗುರಿಯನ್ನಾಗಿ ಮಾಡಿಕೊಂಡು ನಿನ್ನನ್ನು ತರಬೇತುಗೊಳಿಸಿಕೊ” ಎಂಬ ಬೈಬಲ್‌ ಸಲಹೆಯನ್ನ ಪಾಲಿಸಿದೆ. (1 ತಿಮೊತಿ 4:7) ಮಾರ್ಷಲ್‌ ಆರ್ಟ್ಸ್‌ಗಾಗಿ ಕೊಡ್ತಿದ್ದ ಸಮಯ, ಹಾಕ್ತಿದ್ದ ಪ್ರಯತ್ನ ಎಲ್ಲವನ್ನ ನಾನೀಗ ಯೆಹೋವನಿಗೆ ಹತ್ರ ಆಗಲಿಕ್ಕೆ, ಆತನ ಸೇವೆ ಮಾಡಲಿಕ್ಕೆ ಉಪಯೋಗಿಸ್ತಿದ್ದೀನಿ. ನನ್ನ ಗರ್ಲ್‌ ಫ್ರೆಂಡ್‌ಗೆ ನಾನು ಬೈಬಲ್‌ ಕಲಿತಿರೋದು ಇಷ್ಟ ಆಗಲಿಲ್ಲ. ಹಾಗಾಗಿ ನಾವು ಬೇರೆ ಆದ್ವಿ. ಜನವರಿ 24, 1987 ರಲ್ಲಿ ನಾನು ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿ ಆದೆ. ಸ್ವಲ್ಪದ್ರಲ್ಲೇ ಪೂರ್ಣ ಸಮಯ ಸೇವೆ ಶುರುಮಾಡ್ದೆ ಅಂದ್ರೆ ಬೇರೆಯವರಿಗೆ ಬೈಬಲ್‌ ಕಲಿಸಕ್ಕೆ ನನ್ನ ಸಮಯನ ಉಪಯೋಗಿಸಿದೆ. ಅವತ್ತಿಂದ ನಾನು ಪೂರ್ಣ ಸಮಯ ಸೇವೆನ ಮಾಡ್ತಾ ಇದ್ದೀನಿ. ಅಮೆರಿಕದ ನ್ಯೂ ಯಾರ್ಕ್‌ನಲ್ಲಿರೋ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯದಲ್ಲೂ ಸ್ವಲ್ಪ ಸಮಯ ಸೇವೆ ಮಾಡಿದೆ.

ಸಿಕ್ಕಿದ ಪ್ರಯೋಜನಗಳು

 ಮೊದಲು ನನ್ನ ಜೀವನ ಏನೋ ಖಾಲಿ ಖಾಲಿ ಅಂತ ಅನಿಸ್ತಿತ್ತು. ದೇವರ ಬಗ್ಗೆ ಸತ್ಯ ಕಲಿತ ಮೇಲೆ ಅಂಥ ಭಾವನೆ ಈಗ ಇಲ್ಲ. ನನ್ನ ಜೀವನಕ್ಕೊಂದು ಅರ್ಥ ಇದೆ. ಭವಿಷ್ಯಕ್ಕಾಗಿ ಒಳ್ಳೇ ನಿರೀಕ್ಷೆ ಇದೆ. ನಿಜವಾಗ್ಲೂ ಈಗ ನಾನು ಖುಷಿಯಾಗಿ ಇದ್ದೀನಿ. ವ್ಯಾಯಾಮ ಮಾಡೋದು ನನಗೆ ಈಗಲೂ ಇಷ್ಟಾನೇ. ಆದ್ರೆ ನನ್ನ ಜೀವನದಲ್ಲಿ ಅದೇ ಮುಖ್ಯ ಅಲ್ಲ, ಯೆಹೋವ ದೇವರ ಸೇವೆನೇ ಮುಖ್ಯ.

 ಮಾರ್ಷಲ್‌ ಆರ್ಟ್ಸ್‌ನ ಹುಚ್ಚಿದ್ದಾಗ ನನ್ನ ಸುತ್ತ ಇರೋ ಜನ್ರ ಬಗ್ಗೆ ಯಾವಾಗ್ಲೂ ಯೋಚನೆ ಮಾಡ್ತಿದ್ದೆ ಅಂದ್ರೆ ಯಾರಾದ್ರೂ ಜಗಳಕ್ಕೆ ಬಂದ್ರೆ ಅವರನ್ನ ಹೇಗೆ ಸೊಲಿಸೋದು ಅಂತಾನೇ ತಲೇಲಿ ಓಡ್ತಿತ್ತು. ಈಗಲೂ ನನ್ನ ಸುತ್ತ ಇರೋ ಜನ್ರ ಬಗ್ಗೆ ಯೋಚನೆ ಮಾಡ್ತಿನಿ. ಆದ್ರೆ ಅವರನ್ನ ಸೋಲಿಸೋದ್ರ ಬಗ್ಗೆ ಅಲ್ಲ, ಅವರಿಗೆ ಹೇಗೆ ಸಹಾಯ ಮಾಡೋದು ಅಂತ. ಬೈಬಲ್‌ ನನಗೆ ಉದಾರಿಯಾಗಿ ಇರಲಿಕ್ಕೆ ಸಹಾಯ ಮಾಡಿದೆ. ಸುಂದರಿಯಾಗಿರೋ ನನ್ನ ಹೆಂಡತಿ ಬ್ರೆಂಡಾಗೆ ಒಳ್ಳೇ ಗಂಡನಾಗಿರಲಿಕ್ಕೂ ಸಹಾಯ ಮಾಡಿದೆ.

 ಮಾರ್ಷಲ್‌ ಆರ್ಟ್ಸ್‌ ನನ್ನ ಜೀವ ಆಗಿತ್ತು. ಈಗ ಅದಕ್ಕಿಂತ ಶ್ರೇಷ್ಠವಾಗಿರೋ ಯೆಹೋವನ ಸೇವೆನೇ ನನ್ನ ಜೀವ ಆಗಿದೆ. ಅದರ ಬಗ್ಗೆ ಬೈಬಲ್‌ ಚೆನ್ನಾಗಿ ವರ್ಣಿಸುತ್ತೆ: “ದೈಹಿಕ ತರಬೇತಿಯು ಸ್ವಲ್ಪಮಟ್ಟಿಗೆ ಪ್ರಯೋಜನಕರವಾಗಿದೆ; ಆದರೆ ದೇವಭಕ್ತಿಯು ಎಲ್ಲ ವಿಧಗಳಲ್ಲಿ ಪ್ರಯೋಜನಕರವಾಗಿದೆ, ಏಕೆಂದರೆ ಅದು ಈಗಲೂ ಮುಂದೆಯೂ ಜೀವವಾಗ್ದಾನವನ್ನು ಹೊಂದಿದ್ದಾಗಿದೆ.”—1 ತಿಮೊತಿ 4:8.

a ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. ಈಗ ಮುದ್ರಿಸುತ್ತಿಲ್ಲ.