ಯುವಜನರ ಪ್ರಶ್ನೆಗಳು
ದೆವ್ವ-ಭೂತ ಇರೋ ಮನೋರಂಜನೆ ತಪ್ಪಾ?
ನಿಮಗೇನನಿಸುತ್ತೆ?
ಜಾತಕ ನೋಡೋದು, ಊಜಾ ಬೋರ್ಡ್‌ನಿಂದ ದುಷ್ಟಾತ್ಮಗಳನ್ನು ಕರೆಸಿ ಮಾತಾಡೋದು, ಕೈತೋರಿಸಿ ಭವಿಷ್ಯದ ಬಗ್ಗೆ ವಿಚಾರಿಸುವುದು ತಪ್ಪಾ?
ದೆವ್ವ-ಭೂತಗಳ ಬಗ್ಗೆ ಇರೋ ಕಥೆಗಳು ಒಳ್ಳೇದರ ಮತ್ತು ಕೆಟ್ಟದರ ಮಧ್ಯೆ ನಡೆಯೋ ಯುದ್ಧ ಅಂತ ಬಣ್ಣಿಸೋ ಕಟ್ಟುಕಥೆಗಳಾ ಅಥವಾ ನಿಜವಾಗಿಯೂ ಆ ರೀತಿ ನಡೆಯುತ್ತಾ?
ದೆವ್ವ-ಭೂತ, ಮಾಟಮಂತ್ರದ ಬಗ್ಗೆ ಇರೋ ವಿಷಯಗಳು ನಮಗೆ ಯಾಕೆ ಇಷ್ಟವಾಗುತ್ತವೆ, ನಾವು ಯಾಕೆ ಈ ವಿಷಯದಲ್ಲಿ ಹುಷಾರಾಗಿರಬೇಕು ಅಂತ ನಾವೀಗ ನೋಡೋಣ.
ಯಾಕೆ ಇದು ಇಷ್ಟ ಆಗುತ್ತೆ?
ಇವತ್ತು ಮನೋರಂಜನೆ ಕ್ಷೇತ್ರದವರು ಸಿನಿಮಾಗಳಲ್ಲಿ, ಟಿವಿ ಶೋಗಳಲ್ಲಿ, ವಿಡಿಯೋ ಗೇಮ್‌ಗಳಲ್ಲಿ, ಪುಸ್ತಕಗಳಲ್ಲಿ ಹೆಚ್ಚಾಗಿ ದೆವ್ವ-ಭೂತಗಳ ಬಗ್ಗೆ ತೋರಿಸಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಇಂಥ ಮನೋರಂಜನೆಗಳನ್ನು ನೋಡಿ ಅನೇಕ ಯುವಜನರು ಜಾತಕ ನೋಡೋದಕ್ಕೆ, ದೆವ್ವ-ಭೂತ ಮತ್ತು ರಕ್ತಪಿಶಾಚಿಗಳ (ವ್ಯಾಂಪೈರ್ಸ್) ಬಗ್ಗೆ ತಿಳ್ಕೊಳ್ಳೋದಕ್ಕೆ ಆಸಕ್ತಿ ತೋರಿಸುತ್ತಿದ್ದಾರೆ ಹಾಗೂ ವಾಮಾಚಾರವನ್ನೂ (ದೆವ್ವಗಳನ್ನು ಸಂಪರ್ಕಿಸುವುದು) ಇಷ್ಟಪಡ್ತಿದ್ದಾರೆ. ಯಾಕೆ? ಕೆಲವು ಕಾರಣಗಳು ಇಲ್ಲಿವೆ ನೋಡಿ:
ದೆವ್ವ-ಭೂತ ಎಲ್ಲಾ ನಿಜವಾಗ್ಲೂ ಇದ್ಯಾ ಅಂತ ತಿಳ್ಕೊಳೋ ಕುತೂಹಲ
ಮುಂದೇನಾಗುತ್ತೆ ಅಂತ ತಿಳ್ಕೊಳೋ ತವಕ
ತೀರಿಹೋದ ನಮ್ಮ ಪ್ರಿಯರ ಜೊತೆ ಮಾತಾಡುವ ಆಸೆ
ಇದ್ಯಾವುದೂ ತಪ್ಪಲ್ಲ. ಉದಾಹರಣೆಗೆ, ಮುಂದೆ ನಮ್ಮ ಜೀವನ ಹೇಗಿರುತ್ತೆ ಅಂತ ಯೋಚಿಸುವುದು ಅಥವಾ ತುಂಬ ಪ್ರೀತಿಸುತ್ತಿದ್ದವರು ತೀರಿಹೋದಾಗ ಅವರನ್ನು ನೆನಪುಮಾಡಿಕೊಳ್ಳುವುದು ಸಹಜ. ಆದರೆ ಇದರಲ್ಲಿ ಕೆಲವು ಅಪಾಯಗಳೂ ಇವೆ. ಅದರ ಬಗ್ಗೆನೂ ನಿಮಗೆ ಗೊತ್ತಿರಬೇಕು.
ನಾವು ಯಾಕೆ ಹುಷಾರಾಗಿ ಇರಬೇಕು?
ಮಾಟಮಂತ್ರದ ಬಗ್ಗೆ, ದೆವ್ವ-ಭೂತಗಳನ್ನು ವಿಚಾರಿಸುವುದರ ಬಗ್ಗೆ ಬೈಬಲ್ ಖಡಕ್ಕಾಗಿ ಮಾತಾಡುತ್ತೆ. ಅದು ಏನು ಹೇಳುತ್ತೆ ನೋಡಿ:
“ಕಣಿಹೇಳುವವರು, ಶಕುನನೋಡುವವರು, ಯಂತ್ರಮಂತ್ರಗಳನ್ನು ಮಾಡುವವರು, ಮಾಟಗಾರರು, ತಂತ್ರಗಾರರು, ಸತ್ತವರನ್ನು ವಿಚಾರಿಸುವವರು, ಬೇತಾಳಕರು, ಪ್ರೇತಸಿದ್ಧರು ಇಂಥವರು ಯಾರೂ ನಿಮ್ಮಲ್ಲಿ ಇರಬಾರದು. ಇಂಥ ಕೆಲಸಗಳನ್ನು ನಡಿಸುವವರು ಯೆಹೋವನಿಗೆ ಅಸಹ್ಯರಾಗಿದ್ದಾರೆ.”—ಧರ್ಮೋಪದೇಶಕಾಂಡ 18:10-12.
ಮಾಟಮಂತ್ರಕ್ಕೆ, ದೆವ್ವ-ಭೂತಗಳಿಗೆ ಸಂಬಂಧಪಟ್ಟ ಎಲ್ಲ ವಿಷಯವನ್ನೂ ಬೈಬಲ್ ಯಾಕೆ ಖಂಡಿಸುತ್ತೆ?
ದೆವ್ವ-ಭೂತಗಳನ್ನು ನಾವು ಸಂಪರ್ಕಿಸಿದರೆ ಅವುಗಳಿಗೆ ಬೆಂಬಲ ಕೊಟ್ಟ ಹಾಗಾಗುತ್ತೆ. ಹಿಂದೆ ಕೆಲವು ದೇವದೂತರು ದೇವರ ವಿರುದ್ಧ ತಿರುಗಿಬಿದ್ದು, ಆತನ ವೈರಿಗಳಾದರು ಅಂತ ಬೈಬಲ್ ಹೇಳುತ್ತೆ. (ಆದಿಕಾಂಡ 6:2; ಯೂದ 6) ಆ ಕೆಟ್ಟ ದೇವದೂತರೇ ಈಗಿರುವ ದೆವ್ವ-ಭೂತಗಳು! ಈ ದೆವ್ವ-ಭೂತಗಳು ಮಂತ್ರವಿದ್ಯೆ ನಡೆಸುವವರ ಮೂಲಕ, ಕಣಿಹೇಳುವವರ ಮೂಲಕ ಮತ್ತು ಜ್ಯೋತಿಷಿಗಳ ಮೂಲಕ ಜನರ ದಾರಿ ತಪ್ಪಿಸುತ್ತಿವೆ. ನಾವೇನಾದ್ರೂ ಇವುಗಳಲ್ಲಿ ಒಳಗೂಡಿದ್ರೆ ದೇವರ ಶತ್ರುಗಳನ್ನು ನಾವು ಫ್ರೆಂಡ್ಸ್ ಮಾಡಿಕೊಂಡ ಹಾಗಾಗುತ್ತೆ!
ಕೆಲವರು ಮಾಟಮಂತ್ರದ ಸಹಾಯದಿಂದ ಮುಂದೇನಾಗುತ್ತೆ ಅಂತ ತಿಳಿಸುತ್ತಾರೆ. ತಮಗೆ ಭವಿಷ್ಯ ತಿಳಿಸೋ ಸಾಮರ್ಥ್ಯ ಇದೆ ಅಂತ ಅವರು ಹೇಳಿಕೊಳ್ಳುತ್ತಾರೆ. ಆದರೆ ಇದು ಸುಳ್ಳು. ಯಾಕೆಂದರೆ ಭವಿಷ್ಯದಲ್ಲಿ ಏನಾಗುತ್ತೆ ಅಂತ ಹೇಳಕ್ಕಾಗೋದು ದೇವರಿಗೆ ಮಾತ್ರ. ಸ್ವತಃ ಆತನೇ “ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ . . . ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹಿದ್ದೇನೆ” ಅಂತ ಹೇಳಿದ್ದಾನೆ.—ಯೆಶಾಯ 46:10; ಯಾಕೋಬ 4:13, 14.
ಮಾಟಮಂತ್ರ ಮಾಡಿ ಸತ್ತವರ ಜೊತೆ ಮಾತಾಡಕ್ಕಾಗುತ್ತೆ ಅನ್ನೋದು ಸುಳ್ಳು. ಯಾಕೆಂದರೆ ಬೈಬಲ್, “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; ಅವರಿಗೆ ಇನ್ನು ಮೇಲೆ ಪ್ರತಿಫಲವೇನೂ ಇಲ್ಲ . . . ಪಾತಾಳದಲ್ಲಿ ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ” ಎಂದು ಹೇಳುತ್ತದೆ.—ಪ್ರಸಂಗಿ 9:5, 10.
ಹಾಗಾಗಿ ಯೆಹೋವನ ಸಾಕ್ಷಿಗಳು ಮಾಟಮಂತ್ರಕ್ಕೆ, ದೆವ್ವ-ಭೂತಗಳಿಗೆ ಸಂಬಂಧಪಟ್ಟ ಯಾವುದೇ ವಿಷಯಗಳನ್ನು ಮಾಡಲ್ಲ. ಅವರು ಇಂಥ ವಿಷಯಗಳಿರುವ ಮನೋರಂಜನೆಯಲ್ಲೂ ಒಳಗೂಡಲ್ಲ. ಮರಿಯ ಎಂಬ ಯುವತಿ ಹೀಗೆ ಹೇಳುತ್ತಾಳೆ: “ಯಾವುದಾದರೂ ಪ್ರೋಗ್ಯ್ರಾಮ್‌ನಲ್ಲಿ ದೆವ್ವ-ಭೂತಗಳಿಗೆ ಸಂಬಂಧಪಟ್ಟ ಸ್ವಲ್ಪ ವಿಷ್ಯ ಇದ್ರೂ ನಾನದನ್ನ ನೋಡಲ್ಲ.” a
ನೀವು ಏನು ಮಾಡಬಹುದು?
ದೆವ್ವ-ಭೂತಗಳಿಗೆ ಸಂಬಂಧಪಟ್ಟ ಯಾವುದೇ ವಿಷಯಗಳನ್ನು ಮಾಡಬೇಡಿ, ಅವುಗಳನ್ನು ನೋಡಲೂಬೇಡಿ. ಆಗ ದೇವರ ವಿರುದ್ಧ ‘ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳುವ ಶುದ್ಧ ಮನಸ್ಸಾಕ್ಷಿಯನ್ನು’ ಕಾಪಾಡಿಕೊಳ್ಳೋಕೆ ಆಗುತ್ತೆ.—ಅಪೊಸ್ತಲರ ಕಾರ್ಯಗಳು 24:16.
ನಿಮ್ಮ ಹತ್ತಿರ ದೆವ್ವ-ಭೂತಗಳಿಗೆ ಸಂಬಂಧಪಟ್ಟ ಯಾವುದಾದರೂ ವಸ್ತುಗಳಿದ್ದರೆ ಅದನ್ನು ಬಿಸಾಡಿಬಿಡಿ. ಒಂದನೇ ಶತಮಾನದಲ್ಲಿ ಕೆಲವು ಜನರು ತಮ್ಮ ಹತ್ತಿರ ಇದ್ದ ಇಂಥ ಬೆಲೆಬಾಳುವ ವಸ್ತುಗಳನ್ನು ಏನು ಮಾಡಿದ್ರು ಅಂತ ಅಪೊಸ್ತಲರ ಕಾರ್ಯಗಳು 19:19, 20ರಲ್ಲಿದೆ. ಅದನ್ನು ಓದಿ ನೋಡಿ.
ನೆನಪಿಡಿ: ನೀವು ದೆವ್ವ-ಭೂತದ ಬಗ್ಗೆ ಇರುವ ಯಾವುದೇ ಮನೋರಂಜನೆಯನ್ನು ನೋಡದೇ ಇದ್ದರೆ, ಅದಕ್ಕೆ ಸಂಬಂಧಪಟ್ಟ ಯಾವುದೇ ವಿಷಯಗಳನ್ನು ಮಾಡದೇ ಇದ್ದರೆ, ನೀವು ಯೆಹೋವನ ಪರ ನಿಂತಂತೆ ಆಗುತ್ತೆ. ಆಗ ನಿಮ್ಮ ಬಗ್ಗೆ ದೇವರಿಗೆ ತುಂಬ ಖುಷಿ ಆಗುತ್ತೆ.—ಜ್ಞಾನೋಕ್ತಿ 27:11.
a ಎಲ್ಲಾ ಕಲ್ಪನಾ ಕಥೆಗಳಲ್ಲೂ ದೆವ್ವಗಳ ಬಗ್ಗೆ, ಮಾಟಮಂತ್ರದ ಬಗ್ಗೆ ಇರುತ್ತೆ ಅಂತ ಇದರ ಅರ್ಥ ಅಲ್ಲ. ಒಳ್ಳೇ ಕಥೆಗಳೂ ಇವೆ. ಆದರೆ ಯೆಹೋವನ ಸಾಕ್ಷಿಗಳು ಭೂತ ಪ್ರೇತಗಳಿಗೆ ಸಂಬಂಧಪಟ್ಟ ಯಾವ ವಿಷಯಾನೂ ಮಾಡಲ್ಲ ಮತ್ತು ಅದಕ್ಕೆ ಸಂಬಂಧಿಸಿದ ಮನೋರಂಜನೆಯಲ್ಲಿ ಒಳಗೂಡಲ್ಲ. ಯಾಕೆಂದರೆ ಬೈಬಲ್‌ನಿಂದ ಕಲಿತ ವಿಷಯಗಳಿಗೆ ವಿರುದ್ಧವಾಗಿ ನಡಕೊಳ್ಳಲು ಅವರ ಮನಸ್ಸಾಕ್ಷಿ ಒಪ್ಪಲ್ಲ.—2 ಕೊರಿಂಥ 6:17; ಇಬ್ರಿಯ 5:14.