ಮಾಹಿತಿ ಇರುವಲ್ಲಿ ಹೋಗಲು

ರಕ್ತ ಕೊಡುವುದರ, ತೆಗೆದುಕೊಳ್ಳುವುದರ ಬಗ್ಗೆ ಈಗ ವೈದ್ಯರ ಅಭಿಪ್ರಾಯವೇನು?

ರಕ್ತ ಕೊಡುವುದರ, ತೆಗೆದುಕೊಳ್ಳುವುದರ ಬಗ್ಗೆ ಈಗ ವೈದ್ಯರ ಅಭಿಪ್ರಾಯವೇನು?

‘ರಕ್ತವನ್ನು . . . ವರ್ಜಿಸಿರಿ’ ಎಂಬ ಬೈಬಲ್‌ ಆಜ್ಞೆಗನುಸಾರ, ಯೆಹೋವನ ಸಾಕ್ಷಿಗಳು ರಕ್ತವನ್ನು ತೆಗೆದುಕೊಳ್ಳುವುದೂ ಇಲ್ಲ ಕೊಡುವುದೂ ಇಲ್ಲ. ರಕ್ತದ ಕುರಿತ ಅವರ ಈ ನಿಲುವನ್ನು ಅನೇಕ ದಶಕಗಳಿಂದ ಜನರು ದೂರುತ್ತಿದ್ದಾರೆ. ರೋಗಿಗಳು ಗುಣಮುಖರಾಗಬೇಕಾದರೆ ರಕ್ತ ಅತಿ ಪ್ರಾಮುಖ್ಯ ಎಂದು ನಂಬಿದ ವೈದ್ಯರು ಸಹ ಇದನ್ನು ಒಪ್ಪಲು ಸಿದ್ಧರಿರಲಿಲ್ಲ.​—ಅಪೊಸ್ತಲರ ಕಾರ್ಯಗಳು 15:29.

ಆದರೆ ಈಗ ಈ ಆಲೋಚನೆ ಬದಲಾಗಿ, ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಮಂದಿ ಅನುಭವಸ್ಥರು ರಕ್ತರಹಿತ ಶಸ್ತ್ರಚಿಕಿತ್ಸೆಯ ಪರವಾಗಿ ತಮ್ಮ ಧನಿಯೆತ್ತಿದ್ದಾರೆ. ಬಲವಾದ ವೈದ್ಯಕೀಯ ಆಧಾರಗಳೇ ಇದಕ್ಕೆ ಕಾರಣ.

ಸ್ಟಾನ್‌ಫರ್ಡ್‌ ವಿದ್ಯಾಲಯದ ವೈದ್ಯಕೀಯ ಶಿಕ್ಷಣ ಕೇಂದ್ರವು ಸ್ಟಾನ್‌ಫರ್ಡ್‌ ಮೆಡಿಸಿನ್‌ ಮ್ಯಾಗಜೀನ್‌ ಎಂಬ ಪತ್ರಿಕೆಯನ್ನು ಪ್ರಕಟಿಸುತ್ತದೆ. ಆ ಪತ್ರಿಕೆಯ 2013ರ ಸಂಚಿಕೆಯೊಂದರಲ್ಲಿ ರಕ್ತಪೂರಣಗಳ ಇಳಿತದ ಹಿಂದಿರುವ ಕಾರಣಗಳನ್ನು ತಿಳಿಸುವಂಥ ವಿಶೇಷ ವರದಿಯೊಂದು ಬಂದಿತ್ತು. ಅದರ ಲೇಖಕಿಯಾದ ಸಾರಾ ಸಿ. ಪಿ. ವಿಲ್ಯಮ್ಸ್‌ ಹೇಳುವುದು: “ಲೋಕದಾದ್ಯಂತ ಹಲವಾರು ಆಸ್ಪತ್ರೆಗಳು, ಶಸ್ತ್ರಚಿಕಿತ್ಸಾಲಯಗಳು ರೋಗಿಗಳಿಗೆ ಅಗತ್ಯಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಹಾಗೂ ಹೆಚ್ಚು ಪ್ರಮಾಣದಲ್ಲಿ ರಕ್ತವನ್ನು ಕೊಡುತ್ತಿವೆ. ಇದನ್ನು ಈ ದಶಕದಲ್ಲಿ ನಡೆಸಲಾದ ಎಷ್ಟೋ ಸಂಶೋಧನೆಗಳು ಬಹಿರಂಗ ಪಡಿಸಿವೆ.”

ಮುಂದೆ ಲೇಖಕಿ ಸಾರಾರವರು ಡಾ. ಪೆಟ್ರಿಷ್ಯಾ ಫೋರ್ಡ್‌ರವರ ಮಾತನ್ನು ಉಲೇಖಿಸಿದ್ದಾರೆ. ಡಾ. ಫೋರ್ಡ್‌, ಪೆನ್ಸಿಲ್ವೇನಿಯ ಆಸ್ಪತ್ರೆಯ ರಕ್ತರಹಿತ ಔಷಧ ಮತ್ತು ಶಸ್ತ್ರಚಿಕಿತ್ಸೆಗಾಗಿರುವ ಕೇಂದ್ರದಲ್ಲಿ ನಿರ್ಮಾಪಕಿ ಹಾಗೂ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಹೇಳಿಕೆ ಹೀಗಿತ್ತು: “ರಕ್ತದ ಪ್ರಮಾಣ ಒಂದು ಮಟ್ಟಕ್ಕಿಂತ ಕಡಿಮೆಯಾದರೆ ಮನುಷ್ಯ ಉಳಿಯುವುದಿಲ್ಲ ಎಂಬ ಅಪನಂಬಿಕೆ ವೈದ್ಯಕೀಯ ಕ್ಷೇತ್ರದಲ್ಲಿ ಬೇರೂರಿದೆ. ರಕ್ತ ಜೀವರಕ್ಷಕ ಎಂದು ಹಲವರ ಗಾಢ ನಂಬಿಕೆ. ಕೆಲವೊಮ್ಮೆ ಇದು ನಿಜವಾಗಿದ್ದರೂ, * ಹೆಚ್ಚಿನ ಸಂದರ್ಭಗಳಲ್ಲಿ ರೋಗಿಗಳು ರಕ್ತ ತೆಗೆದುಕೊಳ್ಳದೆ ಚೇತರಿಸಿಕೊಳ್ಳುತ್ತಾರೆ.”

ರಕ್ತದ ಬಗ್ಗೆ ಯೆಹೋವನ ಸಾಕ್ಷಿಗಳ ನಿಲುವನ್ನು ತಿಳಿಯಲು, “ಯೆಹೋವನ ಸಾಕ್ಷಿಗಳ ಕುರಿತು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು​—ಯೆಹೋವನ ಸಾಕ್ಷಿಗಳು ಏಕೆ ರಕ್ತ ತೆಗೆದುಕೊಳ್ಳುವುದಿಲ್ಲ?” ಎಂಬ ಲೇಖನವನ್ನು ನೋಡಿ.

ಪ್ರತಿ ವರ್ಷ ಸುಮಾರು 700 ಮಂದಿ ಯೆಹೋವನ ಸಾಕ್ಷಿಗಳಿಗೆ ಚಿಕಿತ್ಸೆ ನೀಡುವ ಡಾ. ಫೋರ್ಡ್‌ ಮುಂದುವರಿಸಿ ಹೇಳಿದ್ದು: “ನನಗೆ ಗೊತ್ತಿರುವ ಹಲವಾರು ವೈದ್ಯರಿಗೆ . . . ರಕ್ತ ತೆಗೆದುಕೊಳ್ಳದಿದ್ದರೆ ರೋಗಿಗಳು ಉಳಿಯುವುದಿಲ್ಲವೆಂಬ ತಪ್ಪಭಿಪ್ರಾಯವಿತ್ತು . . . ಒಂದು ಸಮಯದಲ್ಲಿ ನನಗೂ ಹಾಗೇ ಅನಿಸಿತ್ತು. ಆದರೆ ಕೆಲವೊಂದು ಸುಲಭದ ಚಿಕಿತ್ಸಾ ವಿಧಾನಗಳನ್ನು ಬಳಸಿದರೆ ಈ ರೋಗಿಗಳಿಗೆ ರಕ್ತ ಕೊಡುವ ಅವಶ್ಯಕತೆನೇ ಇರುವುದಿಲ್ಲ ಅಂತ ನಾನು ಶೀಘ್ರದಲ್ಲೇ ಕಲಿತೆ.”

ಇದಕ್ಕೆ ಸಂಬಂಧಪಟ್ಟ ಒಂದು ಅಧ್ಯಯನದ ಫಲಿತಾಂಶಗಳು ಆಗಸ್ಟ್‌ 2012ರಲ್ಲಿ, ಆರ್ಕೈವ್ಸ್‌ ಆಫ್‌ ಇಂಟರ್ನಲ್‌ ಮೆಡಿಸಿನ್‌ ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಒಂದೇ ಆಸ್ಪತ್ರೆಯಲ್ಲಿ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೆಲವು ರೋಗಿಗಳನ್ನು ಆ ಅಧ್ಯಯನಕ್ಕಾಗಿ 28 ವರ್ಷ ಗಮನಿಸಲಾಯಿತು. ರಕ್ತ ಪಡೆದ ರೋಗಿಗಳಿಗಿಂತ ರಕ್ತ ಪಡೆಯದ ಯೆಹೋವನ ಸಾಕ್ಷಿಗಳು ಬೇಗನೆ ಗುಣಮುಖರಾದರು. ಅವರಲ್ಲಿ ಶಸ್ತ್ರಚಿಕಿತ್ಸೆಯ ನಂತರ ತಲೆದೋರುವ ವೈದ್ಯಕೀಯ ಸಮಸ್ಯೆಗಳು ಸಹ ಬೇರೆಯವರಷ್ಟು ಕಂಡುಬರಲಿಲ್ಲ. ಯಶಸ್ವಿಯಾದ ಶಸ್ತ್ರಚಿಕಿತ್ಸೆಗಳಲ್ಲಿ ಹೆಚ್ಚಿನವು ರಕ್ತರಹಿತ ಶಸ್ತ್ರಚಿಕಿತ್ಸೆಗಳಾಗಿದ್ದವು. ಜೊತೆಗೆ, 20 ವರ್ಷಗಳ ನಂತರವೂ ರಕ್ತ ಪಡೆಯದ ಸಾಕ್ಷಿಗಳು ರಕ್ತ ಪಡೆದ ಇತರರಷ್ಟೇ ಗಟ್ಟಿಮುಟ್ಟಾಗಿದ್ದರು.

ಏಪ್ರಿಲ್‌ 8, 2013ರ ದಿ ವಾಲ್‌ ಸ್ಟ್ರೀಟ್‌ ಜರ್ನಲ್‌ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಲೇಖನದಲ್ಲಿ ಹೀಗೆ ತಿಳಿಸಲಾಗಿತ್ತು: “ಧಾರ್ಮಿಕ ಕಾರಣಗಳಿಂದಾಗಿ ರಕ್ತ ಪಡೆಯಲು ಒಪ್ಪದವರಿಗೆ ರಕ್ತರಹಿತ ಶಸ್ತ್ರಚಿಕಿತ್ಸೆಯನ್ನು ಹಲವಾರು ವರ್ಷಗಳಿಂದ ಮಾಡಲಾಗುತ್ತಿದೆ. ಇಂಥ ಚಿಕಿತ್ಸೆಯನ್ನು ಇತ್ತೀಚೆಗೆ ಹೆಚ್ಚಿನ ಆಸ್ಪತ್ರೆಗಳಲ್ಲಿ ಶಿಫಾರಸ್ಸು ಮಾಡಲಾಗುತ್ತಿದೆ . . . ಈ ಚಿಕಿತ್ಸೆಯ ಪರವಾಗಿ ನಿಂತಿರುವ ವೈದ್ಯರು ಹೇಳುವುದೇನೆಂದರೆ, ರಕ್ತರಹಿತ ಶಸ್ತ್ರಚಿಕಿತ್ಸೆಯಲ್ಲಿ ರಕ್ತದ ಖರೀದಿ, ಶೇಖರಣೆ, ಸಂಸ್ಕರಣೆ, ಪರೀಕ್ಷೆ ಮತ್ತು ರಕ್ತಪೂರಣಕ್ಕಾಗಿ ಆಗುವ ಖರ್ಚು ಇರುವುದಿಲ್ಲ. ಅಲ್ಲದೆ ರಕ್ತ ತೆಗೆದುಕೊಳ್ಳುವುದರಿಂದ ಎದುರಾಗುವ ಸಮಸ್ಯೆ ಮತ್ತು ಸೋಂಕುಗಳು ಇರುವುದಿಲ್ಲ. ಆಸ್ಪತ್ರೆ ಖರ್ಚು ಸಹ ಕಡಿಮೆಯಾಗುತ್ತದೆ.”

ಕ್ಲೀವ್‌ಲೆಂಡ್‌ ಕ್ಲಿನಿಕ್‌ನ ರಕ್ತ ನಿರ್ವಹಣೆಯ ನಿರ್ದೇಶಕರಾಗಿರುವ ರಾಬರ್ಟ್‌ ಲಾರೆಂಜ್‌ ಹೇಳಿದ್ದು: “ರೋಗಿಗೆ ರಕ್ತ ಕೊಟ್ಟು ಅವನಿಗೆ ಒಳ್ಳೆಯದು ಮಾಡುತ್ತಿದ್ದೇವೆ ಅಂತ ತಕ್ಷಣಕ್ಕೆ ನಮಗನಿಸಬಹುದು . . . ಆದರೆ ಇದು ನಿಜವಲ್ಲವೆಂದು ಹಲವಾರು ವರ್ಷಗಳ ಸಂಶೋಧನೆ ತೋರಿಸುತ್ತದೆ.”

^ ಪ್ಯಾರ. 5 ರಕ್ತವನ್ನು ಯೆಹೋವನ ಸಾಕ್ಷಿಗಳು ಎಷ್ಟು ಗೌರವದಿಂದ ನೋಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ದಯವಿಟ್ಟು ಈ ಲೇಖನವನ್ನು ನೋಡಿ “ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು—ನೀವು ಏಕೆ ರಕ್ತ ತೆಗೆದುಕೊಳ್ಳುವುದಿಲ್ಲ?