ವಿಕಾಸವೇ? ವಿನ್ಯಾಸವೇ?
‘V’ ಆಕಾರದಲ್ಲಿ ರೆಕ್ಕೆ ಚಾಚುವ ಬಿಳಿ ಚಿಟ್ಟೆ
ಸಾಮಾನ್ಯವಾಗಿ ಚಿಟ್ಟೆಗಳು ಹಾರೋಕೆ ಸೂರ್ಯನ ಶಾಖ ತುಂಬ ಮುಖ್ಯ. ಆ ಶಾಖ ರೆಕ್ಕೆಗಳಿಗೆ ಹಾರಲು ಶಕ್ತಿ ಕೊಡುತ್ತೆ. ಆದ್ರೆ ಒಂದು ಜಾತಿಯ ಬಿಳಿ ಚಿಟ್ಟೆಯ (ಕ್ಯಾಬೇಜ್ ವೈಟ್ ಬಟರ್‌ಫ್ಲೈ) ವಿಶೇಷತೆ ಏನಂದ್ರೆ, ಇದು ಬಿಸಿಲು ಇಲ್ಲದೇ ಇರೋವಾಗ್ಲೂ ಬೇರೆಲ್ಲಾ ಚಿಟ್ಟೆಗಳಿಗಿಂತ ಬೇಗ ಹಾರುತ್ತೆ. ಅಂಥದ್ದೇನಿದೆ ಈ ಬಿಳಿ ಚಿಟ್ಟೆಯಲ್ಲಿ?
ಪರಿಗಣಿಸಿ: ಚಿಟ್ಟೆಗಳು ಹಾರೋ ಮುಂಚೆ ರೆಕ್ಕೆ ಪೂರ್ತಿ ಮುಚ್ಚಿಕೊಂಡು ಅಥವಾ ಪೂರ್ತಿ ಹರಡಿಕೊಂಡು ಸೂರ್ಯನ ಶಾಖ ಹೀರಿಕೊಳ್ಳುತ್ತವೆ. ಆದ್ರೆ ಬಿಳಿ ಚಿಟ್ಟೆ ಮಾತ್ರ ರೆಕ್ಕೆನ ‘V’ ಆಕಾರದಲ್ಲಿ ಚಾಚುತ್ತೆ. ಬಿಳಿ ಚಿಟ್ಟೆಗಳು ಜಾಸ್ತಿ ಶಾಖ ಹೀರಿಕೊಳ್ಳೋಕೆ ರೆಕ್ಕೆಗಳನ್ನ ‘V’ ಆಕಾರದಲ್ಲಿ ಹರಡುತ್ತೆ ಅಂತ ಸಂಶೋಧನೆ ಮಾಡಿದಾಗ ಗೊತ್ತಾಯ್ತು. ಈ ಆಕಾರದಲ್ಲಿ ರೆಕ್ಕೆ ಚಾಚೋದ್ರಿಂದ ಸೂರ್ಯನ ಶಾಖ ನೇರವಾಗಿ ಬಿಳಿ ಚಿಟ್ಟೆಯ ಬೆನ್ನಿಗೆ ಬೀಳುತ್ತೆ. ಇದ್ರಿಂದ ರೆಕ್ಕೆಯ ಸ್ನಾಯುಗಳು ಹಾರಲು ಶಕ್ತಿ ಪಡೆಯುತ್ತೆ.
ಇಂಗ್ಲೆಂಡ್‌ನ ಎಕ್ಸೆಟರ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಆಕಾರದಲ್ಲಿ ಬಿಳಿ ಚಿಟ್ಟೆ ರೆಕ್ಕೆ ಚಾಚೋದನ್ನ ಗಮನಿಸಿದರು. ಸೋಲಾರ್ ಪ್ಯಾನಲ್‌ಗಳನ್ನು ಇದೇ ಆಕಾರದಲ್ಲಿ ಜೋಡಿಸಿದರೆ ಹೆಚ್ಚು ಪ್ರಯೋಜನ ಆಗಬಹುದಾ ಅಂತ ಯೋಚಿಸಿದರು. ಆಶ್ಚರ್ಯ ಏನೆಂದ್ರೆ, ಈ ರೀತಿ ಜೋಡಿಸಿದಾಗ ಅವರು 50% ಹೆಚ್ಚು ಶಕ್ತಿಯನ್ನು ಉತ್ಪಾದಿಸಿದರು.
ಬಿಳಿ ಚಿಟ್ಟೆಯ ರೆಕ್ಕೆಯ ಮೇಲ್ಭಾಗ ತುಂಬ ಪ್ರತಿಫಲಿಸುತ್ತೆ ಅಂತನೂ ಅವ್ರಿಗೆ ಗೊತ್ತಾಯ್ತು. ಅದಕ್ಕೆ ಅವ್ರು ಪ್ರತಿಫಲಿಸುವ ಸೋಲಾರ್ ಪ್ಯಾನಲ್‌ಗಳನ್ನು ತಯಾರಿಸಿ, ಅವನ್ನ ‘V’ ಆಕಾರದಲ್ಲಿ ಜೋಡಿಸಿದರು. ಇದ್ರಿಂದ ಸೋಲಾರ್ ಪ್ಯಾನಲ್‌ಗಳ ತೂಕ ಕಡಿಮೆಯಾಯ್ತು, ಶಕ್ತಿ ಜಾಸ್ತಿಯಾಯ್ತು. ಇದನ್ನೆಲ್ಲ ನೋಡಿದ ಮೇಲೆ ಸಂಶೋಧಕರಾದ ಪ್ರೊಫೆಸರ್ ರಿಚರ್ಡ್ ಫ್ರೆಂಚ್‌ಕಾಂಸ್ಟಂಟ್, ಬಿಳಿ ಚಿಟ್ಟೆಗೆ ‘ಸೂರ್ಯನ ಶಾಖ ಹೀರೋದ್ರಲ್ಲಿ ಎತ್ತಿದ ಕೈ’ ಅಂತ ಬಿರುದು ಕೊಟ್ರು.
ನೀವೇನು ನೆನಸುತ್ತೀರಿ? ರೆಕ್ಕೆನ ‘V’ ಆಕಾರದಲ್ಲೇ ಚಾಚಬೇಕಂತ ಬಿಳಿ ಚಿಟ್ಟೆಗೆ ಹೇಗೆ ಗೊತ್ತಾಯ್ತು? ಇದು ವಿಕಾಸನಾ? ಅಥವಾ ಸೃಷ್ಟಿಕರ್ತನ ಕೈ ಕೆಲಸನಾ?