ಬೈಬಲ್ ವಚನಗಳ ವಿವರಣೆ
ಕೀರ್ತನೆ 23:4—‘ನಾನು ಮರಣಾಂಧಕಾರದ ಕಣಿವೆಯಲ್ಲಿ ನಡೆಯುವಾಗಲೂ’
“ಕತ್ತಲ ಕಣಿವೆಯಲ್ಲಿ ನಾನು ನಡೆದ್ರೂ, ಹಾನಿ ಆಗುತ್ತೆ ಅನ್ನೋ ಭಯ ನನಗಿಲ್ಲ, ಯಾಕಂದ್ರೆ ನೀನೇ ನನ್ನ ಜೊತೆ ಇದ್ದೀಯ, ನಿನ್ನ ಕೋಲು, ನಿನ್ನ ಬೆತ್ತ ನನಗೆ ಧೈರ್ಯ ಕೊಡುತ್ತೆ.”—ಕೀರ್ತನೆ 23:4, ಹೊಸ ಲೋಕ ಭಾಷಾಂತರ.
“ನಾನು ಕಾರ್ಗತ್ತಲಿನ [ಮರಣಾಂಧಕಾರದ, ಪಾದಟಿಪ್ಪಣಿ] ಕಣಿವೆಯಲ್ಲಿ ನಡೆಯುವಾಗಲೂ ನೀನು ಹತ್ತಿರವಿರುವದರಿಂದ ಕೇಡಿಗೆ ಹೆದರೆನು; ನಿನ್ನ ದೊಣ್ಣೆಯೂ ನಿನ್ನ ಕೋಲೂ ನನಗೆ ಧೈರ್ಯಕೊಡುತ್ತವೆ.”—ಕೀರ್ತನೆ 23:4, ಸತ್ಯವೇದವು.
ಕೀರ್ತನೆ 23:4 a—ಅರ್ಥ
ತನ್ನ ಆರಾಧಕರು ಕಷ್ಟದಲ್ಲಿ ಇರುವಾಗಲೂ ದೇವರು ಅವರನ್ನು ಸಂರಕ್ಷಿಸುತ್ತಾನೆ. ಅವರ ಕಾಳಜಿ ವಹಿಸುತ್ತಾನೆ. ಒಬ್ಬ ಕುರುಬ ತನ್ನ ಕುರಿಯನ್ನು ನೋಡಿಕೊಳ್ಳುವ ತರ ಯೆಹೋವನು ತನ್ನ ಆರಾಧಕರನ್ನು ನೋಡಿಕೊಳ್ಳುತ್ತಾನೆ ಅಂತ ಈ ವಚನ ವರ್ಣಿಸುತ್ತೆ. b ಈ ವಚನ ಹೇಳೋ ಪ್ರಕಾರ ಕಾರ್ಗತ್ತಲಿನ ಕಣಿವೆ ಅಥವಾ ಅಂಧಕಾರ, ಸಾಯುವ ಪರಿಸ್ಥಿತಿಯಂಥ ಭಯಾನಕ ಸನ್ನಿವೇಶ ಎದುರಿಸುವಾಗಲೂ ಅವರಿಗೆ ಭಯ ಆಗಲ್ಲ, ಒಂಟಿ ಭಾವನೆ ಕಾಡಲ್ಲ. ಯಾಕಂದ್ರೆ ದೇವರೇ ಅವರ ಜೊತೆ ಇದ್ದಾನೆ.
ಹಿಂದಿನ ಕಾಲದಲ್ಲಿ ಒಬ್ಬ ಕುರುಬ ತನ್ನ ಕುರಿಗಳನ್ನು ಆಕ್ರಮಣ ಮಾಡುವ ಪ್ರಾಣಿಗಳಿಂದ ತಪ್ಪಿಸಿ ಕಾಪಾಡಲು ದೊಣ್ಣೆ ಅಥವಾ ಬೆತ್ತವನ್ನು ಉಪಯೋಗಿಸುತ್ತಿದ್ದ. ಕುರಿಗಳನ್ನು ಮೇಯಿಸಲು ಮತ್ತು ಅಪಾಯಕ್ಕೆ ಸಿಲುಕದಂತೆ ಕುರಿಯನ್ನು ಪಕ್ಕಕ್ಕೆ ಎಳೆಯಲು ಅವನು ಊರುಗೋಲು ತರ ಇರೋ ಕೋಲನ್ನು ಕೂಡ ಉಪಯೋಗಿಸುತ್ತಿದ್ದ. ಯೆಹೋವ ದೇವರು ಈ ಪ್ರೀತಿಯ ಕುರುಬರನ ತರ ಇದ್ದಾನೆ. ಆತನು ತನ್ನ ಆರಾಧಕರನ್ನು ಸಂರಕ್ಷಿಸುತ್ತಾನೆ ಮತ್ತು ಅವರನ್ನು ಸರಿಯಾದ ದಾರಿಯಲ್ಲಿ ನಡೆಸುತ್ತಾನೆ. ಜೀವನದಲ್ಲಿ ತುಂಬ ಕಷ್ಟ ಅನುಭವಿಸುವಾಗಲೂ ಯೆಹೋವನು ಅವರನ್ನು ಅನೇಕ ವಿಧಗಳಲ್ಲಿ ನೋಡಿಕೊಳ್ಳುತ್ತಾನೆ ಮತ್ತು ಕಾಳಜಿ ವಹಿಸುತ್ತಾನೆ. ಉದಾಹರಣೆಗೆ,
ಆತನು ಬೈಬಲಿನ ಮೂಲಕ ಅವರಿಗೆ ಕಲಿಸುತ್ತಾನೆ ಮತ್ತು ಸಾಂತ್ವನ ಕೊಡುತ್ತಾನೆ.—ರೋಮನ್ನರಿಗೆ 15:4.
ಆತನು ಅವರ ಪ್ರಾರ್ಥನೆಗಳನ್ನು ಕೇಳಿಸಿಕೊಳ್ಳುತ್ತಾನೆ ಮತ್ತು ಅವರಿಗೆ ಬೇಕಾದ ಮಾನಸಿಕ ಬಲ ಮತ್ತು ಶಾಂತಿ ಕೊಡುತ್ತಾನೆ.—ಫಿಲಿಪ್ಪಿ 4:6, 7.
ಆತನು ತನ್ನ ಆರಾಧಕರ ಮೂಲಕ ಅವರಿಗೆ ಪ್ರೋತ್ಸಾಹ ಕೊಡುತ್ತಾನೆ.—ಇಬ್ರಿಯ 10:24, 25.
ಮುಂದೆ ಒಳ್ಳೇ ಭವಿಷ್ಯ ಇದೆ ಅಂತ ಆತನು ಮಾತುಕೊಟ್ಟಿದ್ದಾನೆ. ಈಗ ಅವರು ಅನುಭವಿಸುತ್ತಿರುವ ಎಲ್ಲ ನೋವನ್ನು ತೆಗೆದುಹಾಕುತ್ತಾನೆ.—ಕೀರ್ತನೆ 37:29; ಪ್ರಕಟನೆ 21:3-5.
ಕೀರ್ತನೆ 23:4—ಸಂದರ್ಭ
23 ನೇ ಕೀರ್ತನೆಯನ್ನು ದಾವೀದ ಬರೆದನು. ಅವನು ಚಿಕ್ಕವನಾಗಿದ್ದಾಗ ಒಬ್ಬ ಕುರುಬನಾಗಿದ್ದ. ಆಮೇಲೆ ಅವನು ಇಸ್ರಾಯೇಲಿನ ರಾಜನಾದ. (1 ಸಮುವೇಲ 17:34, 35; 2 ಸಮುವೇಲ 7:8) ಯೆಹೋವನು ತನ್ನ ಆರಾಧಕರನ್ನು ನಡೆಸುವ, ಪೋಷಿಸುವ ಮತ್ತು ಚೈತನ್ಯ ಕೊಡುವ ಒಬ್ಬ ಕುರುಬನಂತೆ ಇದ್ದಾನೆ ಅಂತ ಈ ಕೀರ್ತನೆಯ ಆರಂಭದಲ್ಲಿ ದಾವೀದ ವರ್ಣಿಸಿದನು.—ಕೀರ್ತನೆ 23:1-3.
ಕೀರ್ತನೆ 23:2, 3 ರಲ್ಲಿ ದಾವೀದ ದೇವರಿಗೆ “ಆತನು” ಅಂತ ಹೇಳ್ತಾನೆ. ಆದರೆ 4 ನೇ ವಚನದಲ್ಲಿ ದೇವರು ಕೊಡುವ ಸಂರಕ್ಷಣೆ ಬಗ್ಗೆ ಹೇಳುವಾಗ “ನೀನು” ಅಂತ ಹೇಳುತ್ತಾನೆ. ಇದು ದಾವೀದ ದೇವರಿಗೆ ಎಷ್ಟು ಆಪ್ತನಾಗಿದ್ದಾನೆ ಅಂತ ತೋರಿಸುತ್ತದೆ. ‘ನನ್ನ ಮೇಲೆ ದೇವರಿಗೆ ಕಾಳಜಿ ಇದೆ. ನಾನು ಏನೇನು ಕಷ್ಟ ಅನುಭವಿಸ್ತಿದ್ದೀನಿ ಅಂತ ಆತನಿಗೆ ಗೊತ್ತಿದೆ’ ಅಂತ ದಾವೀದ ಅರ್ಥಮಾಡಿಕೊಂಡ. ಹಾಗಾಗಿ ದಾವೀದನಿಗೆ ಭಯ ಇರಲಿಲ್ಲ.
ಕೀರ್ತನೆ 23:1-4 ರಲ್ಲಿ ಕುರುಬ ಮತ್ತು ಕುರಿಗಳ ರೂಪಕಾಲಂಕಾರ ಇದೆ. ಆದರೆ 5 ಮತ್ತು 6 ವಚನಗಳಲ್ಲಿ ಅತಿಥಿಸತ್ಕಾರ ತೋರಿಸುವವನ ಮತ್ತು ಅತಿಥಿಗಳ ರೂಪಕಾಲಂಕಾರ ಇದೆ. ಯೆಹೋವನು ಧಾರಾಳವಾಗಿ ಅತಿಥಿಸತ್ಕಾರ ತೋರಿಸುವವನಂತೆ ಇದ್ದಾನೆ. ದಾವೀದನನ್ನು ಒಬ್ಬ ದೊಡ್ಡ ಅತಿಥಿಯಂತೆ ಉಪಚರಿಸುತ್ತಾನೆ. ದೇವರು ದಾವೀದನಿಗೆ ತೋರಿಸುವ ಕಾಳಜಿಯನ್ನು ಅವನ ವೈರಿಗಳಿಗೂ ತಡೆಯಲಿಕ್ಕೆ ಆಗಲ್ಲ. ತನಗೆ ಜೀವ ಇರೋ ತನಕ ದೇವರು ಒಳ್ಳೇತನ ಮತ್ತು ಪ್ರೀತಿ ತೋರಿಸುತ್ತಾನೆ ಅಂತ ದಾವೀದ ಈ ಕೀರ್ತನೆಯ ಕೊನೆಯಲ್ಲಿ ಭರವಸೆಯಿಂದ ಹೇಳಿದ.
ಕೀರ್ತನೆ 23 ರಲ್ಲಿ ಯೆಹೋವನನ್ನು ಕುರುಬನಿಗೆ, ಅತಿಥಿಸತ್ಕಾರ ಮಾಡುವವನಿಗೆ ಹೋಲಿಸಿರುವುದು ಆತನು ತನ್ನ ಆರಾಧಕರನ್ನು ಯಾವಾಗಲೂ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ ಅಂತ ತೋರಿಸುತ್ತದೆ.—1 ಪೇತ್ರ 2:25.
a ಕೆಲವು ಬೈಬಲ್ಗಳಲ್ಲಿ ಈ ಕೀರ್ತನೆ 22 ನೇ ಕೀರ್ತನೆಯಲ್ಲಿದೆ. ಒಟ್ಟು 150 ಕೀರ್ತನೆಗಳು ಇವೆ. ಕೆಲವು ಬೈಬಲ್ಗಳಲ್ಲಿ ಕೀರ್ತನೆಗಳಿಗೆ ಹೀಬ್ರು ಮ್ಯಾಸೊರೆಟಿಕ್ ಗ್ರಂಥಕ್ಕೆ ಅನುಸಾರ ಕ್ರಮಸಂಖ್ಯೆ ಕೊಡಲಾಗಿದೆ. ಬೇರೆ ಬೈಬಲ್ಗಳಲ್ಲಿ ಗ್ರೀಕ್ ಸೆಪ್ಟೂಅಜಂಟ್ಗೆ ಅನುಸಾರ ಕ್ರಮಸಂಖ್ಯೆ ಕೊಡಲಾಗಿದೆ. ಹೀಬ್ರು ಶಾಸ್ತ್ರಗ್ರಂಥದ ಗ್ರೀಕ್ ಭಾಷಾಂತರಕ್ಕೆ ಸೆಪ್ಟೂಅಜಂಟ್ ಅಂತ ಹೆಸರು. ಈ ಭಾಷಾಂತರ ಮುಗಿದದ್ದು ಕ್ರಿ.ಪೂ 2 ನೇ ಶತಮಾನದಲ್ಲಿ.
b ದೇವರ ಹೆಸರು ಯೆಹೋವ. ಬೈಬಲಲ್ಲಿ ಆತನನ್ನು ಹೆಚ್ಚಾಗಿ ಕುರಿಗಳನ್ನು ಕೋಮಲವಾಗಿ ನೋಡಿಕೊಳ್ಳುವ ಕುರುಬನೆಂದು ವರ್ಣಿಸಲಾಗಿದೆ. ಆತನನ್ನು ಆರಾಧಿಸುವವರನ್ನು ಕುರಿಗಳೆಂದು ವರ್ಣಿಸಲಾಗಿದೆ. ಅವರು ಸುರಕ್ಷೆ ಮತ್ತು ಬೆಂಬಲಕ್ಕಾಗಿ ಆತನ ಮೇಲೆ ಆತುಕೊಳ್ಳುತ್ತಾರೆ.—ಕೀರ್ತನೆ 100:3; ಯೆಶಾಯ 40:10, 11; ಯೆರೆಮೀಯ 31:10; ಯೆಹೆಜ್ಕೇಲ 34:11-16.