ವಿವಾಹ ಮತ್ತು ಕುಟುಂಬ | ವಿವಾಹ
ಸಂಗಾತಿಗೆ ಸಮಯ ಕೊಡಿ
ಗಂಡ ಹೆಂಡ್ತಿ ಒಟ್ಟಿಗೆ ಇದ್ರೂ ಅವ್ರಿಗೆ ಮಾತಾಡೋಕೆ ಸಮಯ ಸಿಗಲ್ಲ. ಯಾಕೆ ಹಾಗೆ?
ಒಟ್ಟಿಗೆ ಇದ್ರೂ ಅಪರಿಚಿತರಂತೆ ಇರ್ತಾರೆ ಯಾಕೆ?
ಸುಸ್ತು
“ನಾವಿಬ್ರೂ ಒಟ್ಟಿಗೆ ಸಮಯ ಕಳೆಯಬೇಕಾದ ಸಂದರ್ಭ ಬಂದಾಗ ಒಂದೋ ನಾನು ಸುಸ್ತಾಗಿರ್ತೀನಿ ಇಲ್ಲಾ ಅವ್ರು ಸುಸ್ತಾಗಿರ್ತಾರೆ. ನಂಗೆ ಸುಸ್ತಾದ್ರೆ ಚಿಕ್ಕಪುಟ್ಟ ವಿಷಯಗಳಿಗೂ ಕೋಪ ಬರುತ್ತೆ. ಹಾಗಾಗಿ ನಾವಿಬ್ರೂ ಸೇರಿ ಟಿವಿ ನೋಡ್ತೀವಿ.”—ಆ್ಯನ್.
ಆನ್ಲೈನ್ ಅನ್ನೋ ವಿಲನ್
“ಸಾಮಾಜಿಕ ಜಾಲತಾಣ (Social media) ಮತ್ತು ಆನ್ಲೈನ್ ಮನರಂಜನೆ ನಮ್ಮ ಸಮಯವನ್ನ ಕಸಿದುಕೊಳ್ಳಬಹುದು. ನೀವು ಸಂಗಾತಿ ಜೊತೆ ಮಾತಾಡದೇ ನಿಮ್ಮ ಮೊಬೈಲಿನಲ್ಲೇ ಮುಳುಗಿ ಹೋದ್ರೆ ಒಬ್ಬರಿಗೊಬ್ರು ಸಮಯ ಕೊಡೋಕೆ ಆಗಲ್ಲ. ನೀವಿಬ್ರೂ ಒಂದೇ ರೂಮಿನಲ್ಲಿದ್ರೂ ಎಲ್ಲೋ ತುಂಬ ದೂರ ಇದ್ದ ಹಾಗೆ ಅನಿಸುತ್ತೆ.”—ಕ್ಯಾಥರಿನ್.
ನನ್ನ ಇಂಟ್ರೆಸ್ಟ್ ಬೇರೆ ಅವ್ರ ಇಂಟ್ರೆಸ್ಟ್ ಬೇರೆ
“ನನ್ನ ಗಂಡ ಕೆಲ್ಸ ಮುಗಿಸಿ ಬಂದಾಗ ಅವ್ರಿಗೆ ಇಷ್ಟವಾಗಿರೋ ವಿಷಯಗಳಿಗೆ (Hobby) ಸಮಯ ಕೊಡ್ತಾರೆ. ನಿಜ ಅವ್ರು ಕಷ್ಟ ಪಟ್ಟು ಕೆಲ್ಸ ಮಾಡ್ತಾರೆ ಹಾಗಾಗಿ ಆರಾಮಾಗಿರೋಕೆ ಅವ್ರಿಗೆ ಇಷ್ಟವಾಗಿರೋ ವಿಷಯಗಳನ್ನ ಮಾಡಬೇಕು. ಆದ್ರೆ ನಂಗೂ ಸ್ವಲ್ಪ ಸಮಯ ಕೊಟ್ಟಿದ್ರೆ ಚೆನ್ನಾಗಿರ್ತಿತ್ತು.”—ಜೇನ್.
ಕೆಲಸ
“ನಾನು ಮನೆಗೆ ಬಂದ ಮೇಲೂ ಕೆಲಸ ಮಾಡಬೇಕಾಗುತ್ತೆ. ಇದ್ರಿಂದ ಮನೆಯಲ್ಲಿರೋರಿಗೆ ಟೈಮ್ ಕೊಡೋಕೆ ಆಗಲ್ಲ. ಕೆಲವೊಮ್ಮೆ ನಾನು ಕೆಲಸಕ್ಕೆ ಸಂಬಂಧ ಪಟ್ಟ ಇ-ಮೇಲ್ಗೆ ರಿಪ್ಲೈ ಮಾಡ್ತಾ ಇರ್ತೀನಿ ಇಲ್ಲಾ ಮೆಸೇಜ್ ಮಾಡ್ತಾ ಇರ್ತೀನಿ. ಹೀಗೆ ಹೆಂಡತಿಗೆ ಕೊಡಬೇಕಾದ ಸಮಯವನ್ನ ಕೆಲಸದಲ್ಲೇ ಕಳೀತೀನಿ.”—ಮಾರ್ಕ್.
ನೀವೇನು ಮಾಡಬಹುದು?
ಒಟ್ಟಿಗೆ ಸಮಯ ಕಳೆಯೋದು ತುಂಬ ಮುಖ್ಯ.
ಬೈಬಲ್ ತತ್ವ: “ತುಂಬ ಮುಖ್ಯವಾದ ವಿಷ್ಯ ಯಾವುದು ಅಂತ ನೀವು ಚೆನ್ನಾಗಿ ತಿಳ್ಕೊಬೇಕು.”—ಫಿಲಿಪ್ಪಿ 1:10.
ಸ್ವಲ್ಪ ಯೋಚಿಸಿ: ನಿಮ್ಮ ಕೆಲಸ, ಹವ್ಯಾಸಗಳಿಗಿಂತ ನಿಮ್ಮ ಮದುವೆ ಜೀವನ ತುಂಬ ಪ್ರಾಮುಖ್ಯ ಅಂತ ತೋರಿಸ್ತಿದ್ದೀರಾ? ಅಥವಾ ಇವುಗಳನ್ನೆಲ್ಲಾ ಮಾಡಿದ ಮೇಲೆ ಉಳಿದ ಸಮಯವನ್ನ ಸಂಗಾತಿಗೆ ಕೊಡ್ತಿದ್ದೀರಾ?
ಕಿವಿಮಾತು: ಪ್ರತಿದಿನ ಯಾವುದೇ ಅಡಚಣೆ ಇಲ್ಲದೆ ನಿಮ್ಮ ಸಂಗಾತಿ ಜೊತೆ ಮಾತಾಡೋಕೆ ಸಮಯ ಮಾಡಿಕೊಳ್ಳಿ. ಆದ್ರೆ ಈ ಸಮಯದಲ್ಲಿ ನೀವು ಮತ್ತು ನಿಮ್ಮ ಸಂಗಾತಿ ಮಾತ್ರ ಇರಬೇಕು.
“ನನ್ನ ಗಂಡ ನಾವಿಬ್ರೂ ಜೊತೇಲಿ ಇರೋ ತರ ಏನಾದ್ರೂ ಪ್ಲಾನ್ ಮಾಡಿದಾಗ ನಂಗೆ ತುಂಬ ಖುಷಿಯಾಗುತ್ತೆ. ಅವ್ರ ಜೊತೆ ನಾನು ಇರಬೇಕು ಅಂತ ಅವ್ರು ಬಯಸ್ತಾರೆ ಅನ್ನೋದನ್ನ ನೋಡುವಾಗ ಅವ್ರು ನನ್ನನ್ನ ತುಂಬ ಪ್ರೀತಿಸ್ತಾರೆ ಅಂತ ಗೊತ್ತಾಗುತ್ತೆ. ಆಗ ನಂಗೂ ಅವ್ರ ಮೇಲೆ ಪ್ರೀತಿ ಜಾಸ್ತಿಯಾಗುತ್ತೆ.”—ಆ್ಯನ್.
ಎಲೆಕ್ಟ್ರಾನಿಕ್ ಸಾಧನಗಳನ್ನ ಅತಿಯಾಗಿ ಬಳಸದಿರಿ
ಬೈಬಲ್ ತತ್ವ: “ಪ್ರತಿಯೊಂದಕ್ಕೂ ಒಂದು ಸಮಯ ಇದೆ.”—ಪ್ರಸಂಗಿ 3:1.
ಇದರ ಬಗ್ಗೆ ಯೋಚಿಸಿ: ನಿಮ್ಮ ಸಂಗಾತಿ ಜೊತೆ ಮಾತಾಡ್ತಾ ಇರುವಾಗ ಬಂದಿರುವ ಮೆಸೇಜ್ಗಳನ್ನ ಎಷ್ಟು ಸಲ ನೋಡ್ತೀರಾ? ಹೀಗೆ ನಿಮ್ಮ ಸಂಗಾತಿಗೆ ಕೊಡಬೇಕಾದ ಸಮಯವನ್ನ ಮೆಸೇಜ್ ಕಸಿದುಕೊಳ್ತಿದ್ಯಾ?
ಕಿವಿಮಾತು: ಒಂದು ಹೊತ್ತಿನ ಊಟನಾದ್ರೂ ನೀವಿಬ್ರೂ ಒಟ್ಟಿಗೆ ಸೇರಿ ಮಾಡಿ. ಆ ಸಮಯದಲ್ಲಿ ಮೊಬೈಲನ್ನ ನಿಮ್ಮಿಂದ ಆದಷ್ಟು ದೂರ ಇಡಿ. ಹೀಗೆ ಮಾಡೋದಾದ್ರೆ ಆ ದಿನದಲ್ಲಿ ನಡೆದ ವಿಷಯಗಳ ಬಗ್ಗೆ ಊಟದ ಸಮಯದಲ್ಲಿ ಸಂಗಾತಿ ಹತ್ರ ಹೇಳಿಕೊಳ್ಳೋಕೆ ಆಗುತ್ತೆ.
ಸಾಧ್ಯವಾದಾಗೆಲ್ಲಾ ಮನೆ ಕೆಲಸ ಮತ್ತು ಶಾಪಿಂಗನ್ನ ಒಟ್ಟಿಗೆ ಮಾಡಿ.
ಬೈಬಲ್ ತತ್ವ: “ಒಬ್ಬನಿಗಿಂತ ಇಬ್ರು ಉತ್ತಮ. ಅವ್ರ ಪರಿಶ್ರಮಕ್ಕೆ ಒಳ್ಳೇ ಪ್ರತಿಫಲ ಸಿಗುತ್ತೆ.”—ಪ್ರಸಂಗಿ 4:9, ಪಾದಟಿಪ್ಪಣಿ.
ಇದರ ಬಗ್ಗೆ ಯೋಚಿಸಿ: ನೀವು ಮತ್ತು ನಿಮ್ಮ ಸಂಗಾತಿ ಮನೆ ಕೆಲಸಗಳನ್ನ ಬೇರೆಬೇರೆ ಮಾಡ್ತೀರಾ? ಶಾಪಿಂಗಾಗಿ ಬೇರೆಬೇರೆ ಹೋಗ್ತೀರಾ?
ಕಿವಿಮಾತು: ಒಬ್ಬರೇ ಮಾಡಬಹುದಾದ ಕೆಲಸ ಆಗಿದ್ರೂ ಅದನ್ನ ಇಬ್ಬರೂ ಸೇರಿ ಮಾಡಿ.
“ಅಂಗಡಿಗೆ ಹೋಗೋದು, ಪಾತ್ರೆ ತೊಳೆಯೋದು, ಬಟ್ಟೆಗಳನ್ನ ಮಡಚೋದು, ಗಾರ್ಡ್ನ್ನಲ್ಲಿ ಕೆಲಸ ಮಾಡೋದು ಇದೆಲ್ಲಾ ಬರೀ ಕೆಲಸಗಳು ಅಂತ ಅಂದ್ಕೊಳ್ಳದೆ ಒಟ್ಟಿಗೆ ಸಮಯ ಕಳೆಯೋಕೆ ಸಿಗೋ ಅವಕಾಶಗಳು ಅಂತ ಅಂದ್ಕೊಳ್ಳಿ.”—ನೀನ.
ಅತಿಯಾಗಿ ನಿರೀಕ್ಷಿಸಬೇಡಿ.
ಬೈಬಲ್ ತತ್ವ: “‘ನಾನು ಹೇಳಿದ್ದೇ ಆಗಬೇಕು’ ಅನ್ನೋ ಗುಣ ನಿಮ್ಮಲ್ಲಿಲ್ಲ ಅಂತ ಎಲ್ರಿಗೂ ಗೊತ್ತಾಗ್ಲಿ.”—ಫಿಲಿಪ್ಪಿ 4:5.
ಇದರ ಬಗ್ಗೆ ಯೋಚಿಸಿ: ನಿಮ್ಮ ಸಂಗಾತಿಯಿಂದ ಅತಿಯಾಗಿ ನಿರೀಕ್ಷಿಸಲ್ಲ ಅಂತ ಹೇಗೆ ತೋರಿಸಿಕೊಡ್ತೀರಾ?
ಕಿವಿಮಾತು: ನಿಮ್ಮಿಬ್ಬರ ಅಗತ್ಯಗಳು ಯಾವುವು ಅಂತ ಮಾತಾಡಿ. ನಿಮ್ಮಿಬ್ರಿಗೂ ಖುಷಿಯಾಗುವಂಥ ವಿಷಯಗಳನ್ನ ಆಯ್ಕೆ ಮಾಡಿ.
“ನನ್ನ ಗಂಡನಿಗೆ ವ್ಯಾಯಾಮ ಮಾಡೋದಂದ್ರೆ ಇಷ್ಟ, ಅದನ್ನ ಮಾಡಿದ್ರೆ ಅವ್ರು ಖುಷಿಯಾಗಿರ್ತಾರೆ. ಆದ್ರೆ ನನ್ನ ಆರೋಗ್ಯ ಸ್ವಲ್ಪ ಸರಿ ಇಲ್ಲ, ಅದಕ್ಕೆ ರೆಸ್ಟ್ ಬೇಕು. ಹಾಗಾಗಿ ನಾನು ನನ್ನ ಗಂಡನಿಗೆ ಹೊರಗೆ ಹೋಗಿ ವ್ಯಾಯಾಮ ಮಾಡಿಕೊಂಡು ಬರೋಕೆ ಹೇಳ್ತೀನಿ. ಆ ಸಮಯದಲ್ಲಿ ನಾನು ಮನೆಯಲ್ಲಿ ರೆಸ್ಟ್ ತಗೊತೀನಿ. ಹೀಗೆ ನಾವಿಬ್ರೂ ಖುಷಿಖುಷಿಯಾಗಿರ್ತೀವಿ. ಯಾಕಂದ್ರೆ ನಾವಿಬ್ರೂ ನಮಗೆ ಇಷ್ಟ ಆಗೋ ಕೆಲಸನೇ ಮಾಡಿರ್ತೀವಿ.”—ಡ್ಯಾನಿಯೇಲ.
ಇದನ್ನ ಮಾಡಿ ನೋಡಿ
ಮೊದಲು ಈ ಪ್ರಶ್ನೆಗಳಿಗೆ ನೀವೇನು ಉತ್ತರ ಕೊಡ್ತೀರ ಅಂತ ಯೋಚಿಸಿ. ಆಮೇಲೆ ಇಬ್ಬರೂ ಸೇರಿ ಚರ್ಚೆ ಮಾಡಿ.
ನೀವಿಬ್ರೂ ಒಟ್ಟಿಗೆ ಸಾಕಷ್ಟು ಸಮಯವನ್ನ ಕಳೆಯುತ್ತಿದ್ದೀರಾ?
ಈಗಾಗಲೇ ನಿಮ್ಮ ಸಂಗಾತಿ ಮಾಡಿರುವ ಯಾವ್ಯಾವ ವಿಷಯಗಳ ಬಗ್ಗೆ ಥ್ಯಾಂಕ್ಸ್ ಹೇಳಲು ನೀವು ಇಷ್ಟಪಡ್ತೀರಾ?
ನಿಮ್ಮ ಸಂಗಾತಿ ಇನ್ನೂ ಯಾವೆಲ್ಲಾ ವಿಷಯದಲ್ಲಿ ಇಂಪ್ರೂವ್ ಮಾಡ್ಲಿಕ್ಕಿದೆ?
ನೀವು ನಿಮ್ಮ ಸಂಗಾತಿ ಜೊತೆ ಮಾತಾಡ್ತಿರೋ ಟೈಮಲ್ಲಿ ನಿಮ್ಮ ಎಲೆಕ್ಟ್ರಾನಿಕ್ ಡಿವೈಸ್ಗಳು ಎಷ್ಟು ಸಲ ನಿಮಗೆ ಅಡಚಣೆ ಮಾಡಿವೆ?
ನಾನು ಸಂಗಾತಿಯಿಂದ ಅತಿಯಾಗಿ ನಿರೀಕ್ಷಿಸ್ತಿದ್ದೀನಾ? ಒಂದು ವೇಳೆ ಹೌದಾದ್ರೆ ಅವು ಯಾವುವು?
ನೀವಿಬ್ರೂ ಒಟ್ಟಿಗೆ ಸಮಯ ಕಳೆಯೋಕೆ ಈ ವಾರ ಯಾವೆಲ್ಲಾ ಬದಲಾವಣೆಗಳನ್ನ ಮಾಡಿಕೊಳ್ಳಬಹುದು?